5 ದಶಕಗಳ ಪ್ರಶಸ್ತಿ ಬರ ನೀಗಿಸುವರೇ ಪಿ.ವಿ. ಸಿಂಧು, ಸೈನಾ ನೆಹ್ವಾಲ್?
ಇಂದಿನಿಂದ ಏಶ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್
ವುಹಾನ್ (ಚೀನಾ), ಎ.23: ವಾರದ ಹಿಂದೆ ಬೆನ್ನುಬೆನ್ನಿಗೆ ನಡೆದ ಮೂರು ಟೂರ್ನಿಗಳ ಬಳಿಕ, ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್ ಬುಧವಾರದಿಂದ ಇಲ್ಲಿ ಆರಂಭವಾಗಲಿರುವ ಏಶ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಭಾರತದ 54 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸುವ ನಿರೀಕ್ಷೆಯಲ್ಲಿ ಕಣಕ್ಕಿಳಿಯಲಿದ್ದಾರೆ. 1965ರಲ್ಲಿ ಭಾರತದ ದಿನೇಶ್ ಖನ್ನಾ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಕಳೆದ ವರ್ಷ ಎಚ್.ಎಸ್. ಪ್ರಣಯ್ ಹಾಗೂ ಸೈನಾ ನೆಹ್ವಾಲ್ ಕ್ರಮವಾಗಿ ತಮ್ಮ ವಿಭಾಗಗಳಲ್ಲಿ ಕಂಚಿನ ಪದಕ ಜಯಿಸಿದ್ದರು.
2 ಬಾರಿಯ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಸೈನಾ, 2010 ಹಾಗೂ 2016ರ ಏಶ್ಯನ್ ಚಾಂಪಿಯನ್ಶಿಪ್ ಟೂರ್ನಿಗಳಲ್ಲಿ ಕಂಚಿನ ಪದಕ ಗೆದ್ದಿದ್ದರೆ, ಸಿಂಧು, 2014ರಲ್ಲಿ ದಕ್ಷಿಣ ಕೊರಿಯದಲ್ಲಿ ನಡೆದ ಏಶ್ಯನ್ ಟೂರ್ನಿಯಲ್ಲಿ ಕಂಚು ಜಯಿಸಿದ್ದರು. ಈ ಋತುವಿನಲ್ಲಿ ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಸಿಂಧು, ತಮ್ಮ ಮೊದಲ ಪಂದ್ಯದಲ್ಲಿ ಜಪಾನ್ನ ಸಯಾಕಾ ತಕಹಶಿ ಅವರನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ. ಇಲ್ಲಿ ಗೆದ್ದರೆ ಸಿಂಧು, ಪಾರ್ನ್ಪವೀ ಚೋಚುವಾಂಗ್ ಅವರನ್ನು ಎದುರಿಸಲಿದ್ದಾರೆ. ಮತ್ತೊಂದೆಡೆ ಟೂರ್ನಿಯಲ್ಲಿ ಏಳನೇ ಶ್ರೇಯಾಂಕ ಪಡೆದಿರುವ ಸೈನಾ, ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಹಾನ್ ಯು ಅವರನ್ನು ಎದುರಿಸಲಿದ್ದು, ಇಲ್ಲಿ ಜಯ ಸಾಧಿಸಿದರೆ ಕ್ವಾರ್ಟರ್ಫೈನಲ್ನಲ್ಲಿ ಜಪಾನ್ನ ಅಕಾನೆ ಯಮಗುಚಿ ಅವರನ್ನು ಎದುರಿಸುವ ಸಾಧ್ಯತೆಯಿದೆ.
ಪುರುಷರ ಸಿಂಗಲ್ಸ್ನಲ್ಲಿ ಶ್ರೀಕಾಂತ್, ಸಮೀರ್ ಆಟ
ಇನ್ನು ಪುರುಷರ ಸಿಂಗಲ್ಸ್ನಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಅವರು ತಮ್ಮ ಮೊದಲ ಸುತ್ತಿನಲ್ಲಿ ಇಂಡೋನೇಶ್ಯದ ಶೆಸರ್ ಹಿರೆನ್ ರುಸ್ತಾವಿಟೊ ಅವರ ಸವಾಲಿಗೆ ಸಜ್ಜಾಗಲಿದ್ದು, ಕ್ವಾರ್ಟರ್ಫೈನಲ್ಗೆ ತಲುಪಿದರೆ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಚೆನ್ ಲಾಂಗ್ರನ್ನು ಎದುರುಗೊಳ್ಳುವ ನಿರೀಕ್ಷೆಯಿದೆ. ಸಮೀರ್ ವರ್ಮಾ ಅವರು ಜಪಾನ್ನ ಕಝುಮಸಾ ಸಕಾಯಿ ಅವರನ್ನು ಪ್ರಥಮ ಸುತ್ತಿನಲ್ಲಿ ಎದುರಿಸಲಿದ್ದು, ಇಲ್ಲಿ ಗೆದ್ದರೆ ಆರನೇ ಶ್ರೇಯಾಂಕದ ಇಂಡೋನೇಶ್ಯದ ಅಂಥೋನಿ ಸಿನಿಸುಕಾ ಗಿಂಟಿಂಗ್ ಅವರನ್ನು ಎದುರಿಸುವ ಸಾಧ್ಯತೆಯಿದೆ. ಪುರುಷರ ಡಬಲ್ಸ್ನಲ್ಲಿ ಅರುಣ್ ಜಾರ್ಜ್-ಸನ್ಯಾಮ್ ಶುಕ್ಲಾ, ಎಮ್.ಆರ್. ಅರ್ಜುನ್- ರಾಮಚಂದ್ರನ್ ಶ್ಲೋಕ್ ಹಾಗೂ ಮನು ಅತ್ರಿ- ಬಿ ಸುಮಿತ್ ರೆಡ್ಡಿ ಜೋಡಿಗಳು ಭಾರತವನ್ನು ಪ್ರತಿನಿಧಿಸಲಿವೆ. ಮಹಿಳಾ ಡಬಲ್ಸ್ನಲ್ಲಿ ಪೂಜಾ ದಂಡು-ಸಂಜನಾ ಸಂತೋಷ್, ಅಪರ್ಣಾ ಬಾಲನ್-ಶೃತಿ ಕೆಪಿ ಮತ್ತಿತರ ಜೋಡಿಗಳು ಹಾಗೂ ಮಿಶ್ರ ಡಬಲ್ಸ್ನಲ್ಲಿ ಭಾರತದ ತಂಡಗಳು ಕಣಕ್ಕಿಳಿಯುತ್ತಿವೆ.