ಝ್ವೆರೆವ್ ಗೆ ಆಘಾತ ನೀಡಿದ ನಿಕೊಲಸ್
►ಬಾರ್ಸಿಲೋನಾ ಓಪನ್ ಟೆನಿಸ್ ►ಶಿಕೋರಿ 3ನೇ ಸುತ್ತಿಗೆ
ಬಾರ್ಸಿಲೋನ, ಎ.24: ಎರಡನೇ ಶ್ರೇಯಾಂಕದ ಜರ್ಮನಿಯ ಯುವ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ಬಾರ್ಸಿಲೋನ ಓಪನ್ ಟೆನಿಸ್ ಟೂರ್ನಿಯಿಂದ ಮಂಗಳವಾರ ಹೊರಬಿದ್ದಿದ್ದಾರೆ. ಝ್ವೆರೆವ್ ಅವರು 81ನೇ ರ್ಯಾಂಕಿನ ನಿಕೊಲಸ್ ಜಾರ್ರಿ ವಿರುದ್ಧ ಪರಾಭವಗೊಂಡರು. ಮಾಜಿ ಚಾಂಪಿಯನ್ ಕೀ ನಿಶಿಕೋರಿ ಹಾಗೂ ಮೂರನೇ ಶ್ರೇಯಾಂಕದ ಡೊಮಿನಿಕ್ ಥೀಮ್ ಸುಲಭದ ಜಯ ಸಾಧಿಸಿ ಮೂರನೇ ಸುತ್ತಿಗೆ ಕಾಲಿಟ್ಟರು. 23 ವರ್ಷದ ಚಿಲಿ ಆಟಗಾರ ನಿಕೊಲಸ್ ವಿರುದ್ಧ ಝ್ವೆರೆವ್ 6-3, 5-7, 6-7ರ ಆಘಾತಕಾರಿ ಸೋಲುಂಡರು. 3ನೇ ಶ್ರೇಯಾಂಕದ ಜರ್ಮನಿ ಆಟಗಾರ ಮೊದಲ ಸೆಟ್ನಲ್ಲಿ ಸುಲಭದ ಜಯ ದಾಖಲಿಸಿದರು. ಆ ಬಳಿಕ ಎರಡನೇ ಸೆಟ್ ಕಳೆದುಕೊಂಡ ಅವರು, ನಿರ್ಣಾಯಕ ಟೈ-ಬ್ರೇಕರ್ವರೆಗೆ ಸಾಗಿದ ಮೂರನೇ ಸೆಟ್ನಲ್ಲೂ ಪರಾಭವಗೊಂಡು ಹೊರ ನಡೆಯಬೇಕಾಯಿತು. ಈ ಸೋಲಿನ ಮೂಲಕ ಝ್ವೆರೆವ್ ಕಳೆದ 7 ಪಂದ್ಯಗಳ ಪೈಕಿ 5ರಲ್ಲಿ ಸೋಲು ಕಂಡಿದ್ದಾರೆ.
ಮತ್ತೊಂದು ಪಂದ್ಯದಲ್ಲಿ, ಎರಡು ವರ್ಷಗಳ ಹಿಂದೆ ಬಾರ್ಸಿಲೋನ ಓಪನ್ನಲ್ಲಿ ಫೈನಲ್ ತಲುಪಿದ್ದ ಆಸ್ಟ್ರಿಯದ ಡೊಮಿನಿಕ್ ಥೀಮ್ ಅವರು ಅರ್ಜೆಂಟೀನ ಡಿಗೊ ಸ್ವಾಟ್ಝ್ಮನ್ ಅವರನ್ನು 6-3, 6-3ರಿಂದ ಮಣಿಸಿ ಮೂರನೇ ಸುತ್ತು ಪ್ರವೇಶಿಸಿದರು. 2014, 2015ರ ಟೂರ್ನಿಯ ಚಾಂಪಿಯನ್ ಜಪಾನ್ನ ಕಿ ನಿಶಿಕೋರಿ ಅವರು ಅಮೆರಿಕದ ಟೇಲರ್ ಫ್ರಿಟ್ಝ್ ಅವರನ್ನು 7-5, 6-2 ಸೆಟ್ಗಳಿಂದ ಸೋಲಿಸಿ ಮುನ್ನಡೆದರು. ಇದು ಅವರ ಈ ವರ್ಷದ 14ನೇ ಗೆಲುವು.
ಎರಡನೇ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಜಾನ್ ಲೆನ್ನಾರ್ಡ್ ಸ್ಟ್ರಫ್, ಜಾವುಮ್ ಮುನಾರ್ ಜಯ ಗಳಿಸಿ ಮೂರನೇ ಸುತ್ತಿಗೆ ಲಗ್ಗೆಯಿಟ್ಟರು. ಪ್ರಥಮ ಸುತ್ತಿನ ಪಂದ್ಯಗಳಲ್ಲಿ ಡೇವಿಡ್ ಫೆರರ್, ಮಲೆಕ್ ಜಾಝಿರಿ, ಆಲ್ಬರ್ಟ್ ರಾಮೊಸ್-ವಿನೋಲಾಸ್ ಗೆಲುವು ಕಂಡು ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ.