ನಡಾಲ್, ಫೆಡರರ್ ಮೂರನೇ ಸುತ್ತಿಗೆ ತೇರ್ಗಡೆ, ಫೆಡರರ್
ಇಟಾಲಿಯನ್ ಓಪನ್
ರೋಮ್,ಮೇ 16: ಹಾಲಿ ಚಾಂಪಿಯನ್ ರಫೆಲ್ ನಡಾಲ್ ಹಾಗೂ ವಿಶ್ವದ ನಂ.3ನೇ ಆಟಗಾರ ರೋಜರ್ ಫೆಡರರ್ ಎಟಿಪಿ ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ತೇರ್ಗಡೆಯಾಗಿದ್ದಾರೆ. ಗುರುವಾರ ನಡೆದ ಪುರುಷರ ಸಿಂಗಲ್ಸ್ನ ಎರಡನೇ ಸುತ್ತಿನ ಪಂದ್ಯದಲ್ಲಿ ನಡಾಲ್ ಫ್ರಾನ್ಸ್ನ ಜೆರೆಮಿ ಚಾರ್ಡಿ ಅವರನ್ನು 6-0, 6-1 ನೇರ ಸೆಟ್ಗಳಿಂದ ಸೋಲಿಸಿದರು. 8 ಬಾರಿ ಇಟಾಲಿಯನ್ ಓಪನ್ ಚಾಂಪಿಯನ್ ಆಗಿರುವ ನಡಾಲ್ ಮುಂದಿನ ಸುತ್ತಿನಲ್ಲಿ ಜಾರ್ಜಿಯದ ನಿಕೊಲೊಝ್ ಬಾಸಿಲಾಶ್ವಿಲಿ ಅವರನ್ನು ಎದುರಿಸಲಿದ್ದಾರೆ. ಇದೇ ವೇಳೆ, ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಸ್ವಿಸ್ ಸೂಪರ್ಸ್ಟಾರ್ ಫೆಡರರ್ ಪೋರ್ಚುಗಲ್ನ ಜೊವೊ ಸೌಸಾರನ್ನು 6-4, 6-3 ನೇರ ಸೆಟ್ಗಳಿಂದ ಮಣಿಸಿ ಮೂರನೇ ಸುತ್ತು ತಲುಪಿದ್ದಾರೆ. ಫೆಡರರ್ ಕ್ವಾರ್ಟರ್ ಫೈನಲ್ನಲ್ಲಿ ಸ್ಥಾನ ಗಿಟ್ಟಿಸಲು ಕ್ರೊಯೇಶಿಯದ 13ನೇ ಶ್ರೇಯಾಂಕದ ಬೊರ್ನಾ ಕೊರಿಕ್ ಸವಾಲು ಎದುರಿಸಲಿದ್ದಾರೆ. ಇಟಾಲಿಯನ್ ಓಪನ್ನಲ್ಲಿ ನಾಲ್ಕು ಬಾರಿ ಫೈನಲ್ಗೆ ತಲುಪಿದ್ದ ಫೆಡರರ್ ಎರಡು ವರ್ಷಗಳ ಬಳಿಕ ಮತ್ತೊಮ್ಮೆ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.