ಪಾಕ್ ವಿಶ್ವಕಪ್ ತಂಡದಲ್ಲಿ ಅಲಿ, ಆಮಿರ್, ರಿಯಾಝ್ಗೆ ಸ್ಥಾನ
ಲಾಹೋರ್, ಮೇ.20: ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ವಿಶ್ವಕಪ್ ಕ್ರಿಕೆಟ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಸದಸ್ಯರ ಆಯ್ಕೆ ಪೂರ್ಣಗೊಂಡಿದ್ದು ಬ್ಯಾಟ್ಸ್ ಮ್ಯಾನ್ ಆಸಿಫ್ ಅಲಿ ಹಾಗೂ ವೇಗಿಗಳಾದ ಮುಹಮ್ಮದ್ ಆಮಿರ್ ಮತ್ತು ವಹಬ್ ರಿಯಾಝ್ರನ್ನು ತಂಡಕ್ಕೆ ಸೇರಿಸಲಾಗಿದೆ. ಆಸಿಫ್ ಪುತ್ರಿ 18 ತಿಂಗಳ ನೂರ್ ಫಾತಿಮಾ ರವಿವಾರ ಅಮೆರಿಕದ ಆಸ್ಪತ್ರೆಯಲ್ಲಿ ಕ್ಯಾನ್ಸರ್ನಿಂದ ಮೃತಪಟ್ಟಿದ್ದು ಮಗಳ ಅಂತ್ಯಸಂಸ್ಕಾರ ನೆರವೇರಿಸಿದ ನಂತರ ಆಸಿಫ್ ತಂಡವನ್ನು ಸೇರಲಿದ್ದಾರೆ ಎಂದು ಮುಖ್ಯ ಆಯ್ಕೆಗಾರ ಇಂಝಮಾಮುಲ್ ಹಕ್ ತಿಳಿಸಿದ್ದಾರೆ. ಕಳಪೆ ಫಾರ್ಮ್ನಿಂದಾಗಿ ಪ್ರಾಥಮಿಕ ತಂಡದಿಂದ ಹೊರಗುಳಿದಿದ್ದ ಮುಹಮ್ಮದ್ ಆಮಿರ್ ಅವರನ್ನೂ ಸದ್ಯ ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅಸೌಖ್ಯದಿಂದ ಬಳಲುತ್ತಿದ್ದ ಆಮಿರ್ ಇತ್ತೀಚೆಗೆ ಕೊನೆಗೊಂಡ ಇಂಗ್ಲೆಂಡ್ ವಿರುದ್ಧದ ಅಂತರ್ರಾಷ್ಟ್ರೀಯ ಏಕದಿನ ಸರಣಿಯಲ್ಲೂ ಭಾಗವಹಿಸಿರಲಿಲ್ಲ. ಈ ಸರಣಿಯನ್ನು ಪಾಕಿಸ್ತಾನ 0-4 ಅಂತರದಿಂದ ಕೈಚೆಲ್ಲಿತ್ತು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ತಮ್ಮ ಬೌಲರ್ಗಳು ಪ್ರತಿ ಪಂದ್ಯದಲ್ಲೂ 350ಕ್ಕೂ ಹೆಚ್ಚು ರನ್ಗಳನ್ನು ಬಿಟ್ಟುಕೊಟ್ಟ ಪರಿಣಾಮವಾಗಿ ಪಾಕಿಸ್ತಾನದ ಆಯ್ಕೆಗಾರರು ಇನ್ನೋರ್ವ ವೇಗಿ ವಹಾಬ್ ರಿಯಾಝ್ರನ್ನು ತಂಡಕ್ಕೆ ಸೇರಿಸುವ ಅನಿವಾರ್ಯತೆಗೆ ಒಳಗಾಗಿದ್ದಾರೆ. ಸದ್ಯ 79 ಏಕದಿನ ಪಂದ್ಯಗಳನ್ನು ಆಡಿರುವ ರಿಯಾಝ್ಗೆ 2011 ಮತ್ತು 2015ರ ವಿಶ್ವಕಪ್ ಪಂದ್ಯಗಳಲ್ಲಿ ಆಡಿದ ಅನುಭವವಿದೆ. ಈ ಅನುಭವದ ಫಲವಾಗಿಯೇ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ ಎಂದು ಹಕ್ ತಿಳಿಸಿದ್ದಾರೆ.