ದ್ಯುತಿ ಚಂದ್ ಸಲಿಂಗ ಸಂಬಂಧ ಒಪ್ಪಲು ನಿರಾಕರಿಸಿದ ತಾಯಿ
ಭುವನೇಶ್ವರ, ಮೇ.20: ಭಾರತದ ವೃತ್ತಿಪರ ಓಟಗಾರ್ತಿ ಮತ್ತು ಮಹಿಳೆಯರ 100 ಮೀ. ಓಟದ ಹಾಲಿ ರಾಷ್ಟ್ರೀಯ ಚಾಂಪಿಯನ್ ದ್ಯುತಿ ಚಂದ್ ಅವರ ಸಲಿಂಗ ಸಂಬಂಧವನ್ನು ಒಪ್ಪಲು ಆಕೆಯ ತಾಯಿ ನಿರಾಕರಿಸಿದ್ದಾರೆ. ಚಂದ್ ಬಹಿರಂಗವಾಗಿ ತನ್ನ ಸಲಿಂಗ ಸಂಬಂಧದ ಬಗ್ಗೆ ಮಾತನಾಡಿರುವುದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕೆಗೆ ಪ್ರಶಂಸೆಗಳ ಸುರಿಮಳೆಯೇ ಹರಿದಿದೆ. ಆದರೆ ಆಕೆಯ ಮನೆಯಲ್ಲಿ ಪರಿಸ್ಥಿತಿ ವಿರುದ್ಧವಾಗಿದ್ದು ಆಕೆಯ ತಾಯಿ ಈ ಸಂಬಂಧವನ್ನು ಒಪ್ಪಲು ಸಿದ್ಧರಿಲ್ಲ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ತನ್ನ ಸಹೋದರಿಯನ್ನು ಆಕೆಯ ಜೊತೆಗಾರ್ತಿ ಮತ್ತಾಕೆಯ ಕುಟುಂಬ ವಿವಾಹಕ್ಕೆ ಪೀಡಿಸುತ್ತಿದೆ ಎಂದು ದ್ಯುತಿ ಸಹೋದರಿ ಸರಸ್ವತಿ ಚಂದ್ ಆರೋಪಿಸಿದ್ದರು. ಈ ಆರೋಪವನ್ನು ನಿರಾಕರಿಸಿದ ದ್ಯುತಿ, ನನ್ನನ್ನು ನನ್ನ ಸಹೋದರಿ ಜೈಲಿಗೆ ಕಳುಹಿಸಲು ಬಯಸಿದ್ದಾರೆ ಮತ್ತು ನನ್ನ ಹೆತ್ತವರು ನನ್ನ ಸಲಿಂಗ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆದರೆ ಈಗ ದ್ಯುತಿ ತಾಯಿ ಈ ಮಾತನ್ನು ನಿರಾಕರಿಸಿದ್ದಾರೆ. ದ್ಯುತಿ ನನ್ನ ಅಣ್ಣನ ಮಗಳನ್ನು ಅಂದರೆ ನನ್ನ ಮೊಮ್ಮಗಳನ್ನು ಮದುವೆಯಾಗಲು ಬಯಸಿದ್ದಾಳೆ. ಈ ಸಂಬಂಧದ ಪ್ರಕಾರ ದ್ಯುತಿ ಆಕೆಗೆ ತಾಯಿಯಾಗಬೇಕು. ಹಾಗಾಗಿ ಅದು ಹೇಗೆ ಒಡಿಶಾದ ನಮ್ಮ ಸಮಾಜದಲ್ಲಿ ಈ ಸಂಬಂಧವನ್ನು ಒಪ್ಪಲು ಸಾಧ್ಯ ಎಂದು ದ್ಯುತಿ ತಾಯಿ ಅಖೊಜಿ ಚಂದ್ ಪ್ರಶ್ನಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ, ನನಗೆ ನನ್ನ ಗುರುಗಳ ಬೆಂಬಲವಿದೆ. ಅವರ ನೆರವಿನಿಂದ ನಾನು ಏನು ಬೇಕಾದರೂ ಮಾಡಬಲ್ಲೆ ಎಂದು ದ್ಯುತಿ ಹೇಳುತ್ತಾರೆ. ಆದರೆ ಅವರ ಜೊತೆ ಮಾತನಾಡಲು ಆಕೆ ಬಿಡುವುದಿಲ್ಲ. ಅವಳು ತನ್ನ ಹೆತ್ತವರಿಗೆ ಕೀರ್ತಿ ತರದಿದ್ದರೂ ಚಿಂತೆಯಿಲ್ಲ. ಆದರೆ ಆಕೆ ಕ್ರೀಡೆಯ ಮೂಲಕ ತನ್ನ ದೇಶದ ಘನತೆ ಎತ್ತಿಹಿಡಿಯಬೇಕು. ಆಕೆಯ ಅಭ್ಯಾಸಕ್ಕಾಗಿ ಸರಕಾರ ಸಾಕಷ್ಟು ಹಣ ನೀಡಿದೆ. ಅದಕ್ಕೆ ಆಕೆ ಗೌರವ ನೀಡಬೇಕು ಎಂದು ಅಖೊಜಿ ಚಂದ್ ತಿಳಿಸಿದ್ದಾರೆ.