ಚಿರಯುವಕ ರೋಜರ್ ಫೆಡರರ್ಗೆ ಆಗ ಅಪ್ಪ, ಈಗ ಮಗ ಪ್ರತಿಸ್ಪರ್ಧಿ ..!
ಪ್ಯಾರಿಸ್, ಮೇ 30: ಸ್ವಿಟ್ಝರ್ಲೆಂಡ್ನ ಮಾಜಿ ಚಾಂಪಿಯನ್ ರೋಜರ್ ಫೆಡರರ್ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ನಲ್ಲಿ ಮೂರನೇ ಸುತ್ತು ತಲುಪಿದ್ದಾರೆ. ಮುಂದಿನ ಸುತ್ತಿನಲ್ಲಿ ಫೆಡರರ್ಅವರಿಗೆ ಕ್ಯಾಸ್ಪೆರ್ ರೂಡ್ ಸವಾಲು ಎದುರಾಗಲಿದೆ.
ನಾರ್ವೆಯ ಕ್ಯಾಸ್ಪೆರ್ ರೂಡ್ ಅವರು 1999ರಲ್ಲಿ ಫ್ರೆಂಚ್ ಓಪನ್ ಟೂರ್ನಿಯಲ್ಲಿ ರೋಜರ್ ಫೆಡಡರ್ ಜೊತೆ ಆಡಿದ್ದ ಕ್ರಿಶ್ಚಿಯನ್ ರೂಡ್ ಅವರ ಪುತ್ರ.
ಫೆಡರರ್ ಅವರು ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ನಂ. 144 ಆಟಗಾರ ಜರ್ಮನಿಯ ಓಸ್ಕರ್ ಒಟ್ಟೆ ವಿರುದ್ಧ 6-4, 6-3, 6-4 ಅಂತರದಿಂದ ಜಯ ಗಳಿಸಿ ಮೂರನೇ ಸುತ್ತು ತಲುಪಿದರು.
ರಫೆಲ್ ನಡಾಲ್ರ ಸ್ವಯಂ ಘೋಷಿತ ಅಭಿಮಾನಿ ಎಂದು ಹೇಳಿಕೊಳ್ಳುವ ರೂಡ್ ಅವರು ಇಟಲಿಯ ನಂ.29 ಮ್ಯಾಟೊ ಬಿರ್ರೆಟ್ನಿ ವಿರುದ್ಧ 6-4, 7-5, 6-3 ಅಂತರದಲ್ಲಿ ಜಯ ಗಳಿಸಿ, ಮೂರನೇ ಸುತ್ತು ತಲುಪಿದರು. ಫೆಡರರ್ 1999ರಲ್ಲಿ ಫ್ರೆಂಚ್ ಓಪನ್ನಲ್ಲಿ ಮೊದಲ ಬಾರಿ ಆಡುವಾಗ ಅದೇ ಟೂರ್ನಮೆಂಟ್ನಲ್ಲಿ ಕ್ರಿಶ್ಚಿಯನ್ ರೂಡ್ ಆಡಿದ್ದರು. ಆಗ 17ರ ಹರೆಯದ ಫೆಡರರ್ ಪ್ಯಾಟ್ ರಾಫ್ಟೆರ್ ವಿರುದ್ಧ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು. ಒಂದು ವೇಳೆ ಅವರು ಜಯ ಗಳಿಸಿದ್ದರೆ ಅವರಿಗೆ ಕ್ರಿಶ್ಚಿಯನ್ ರೂಡ್ ಸವಾಲು ಎದುರಾಗುವ ಸಾಧ್ಯತೆ ಇತ್ತು. ರೂಡ್ ಟೂರ್ನಿಯಲ್ಲಿ ಮೂರನೇ ಸುತ್ತು ತಲುಪಿದ್ದರು. ಕ್ರಿಶ್ಚಿಯನ್ ರೂಡ್ 2001ರಲ್ಲಿ ಫ್ರೆಂಚ್ ಓಪನ್ನಲ್ಲಿ ಕೊನೆಯ ಬಾರಿ ಆಡಿದ್ದರು. ಅವರು ಪ್ರಥಮ ಸುತ್ತಿನಲ್ಲಿ ಸಾರ್ಗಿಸ್ ಸಾರ್ಗ್ಸಿಯಾನ್ ವಿರುದ್ಧ ಆಡುವ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಮೂಲಕ ಕೂಟದಿಂದ ನಿವೃತ್ತರಾಗಿದ್ದರು. ಒಂದು ವೇಳೆ ರೂಡ್ ಅವರು ಸರ್ಗ್ಸಿಯಾನ್ ವಿರುದ್ಧ ಜಯ ಗಳಿಸಿದ್ದರೆ ಫೆಡರರ್ ಅವರನ್ನು ಎರಡನೇ ಸುತ್ತಿನಲ್ಲಿ ಎದುರಿಸುವ ಅವಕಾಶ ಪಡೆಯುತ್ತಿದ್ದರು. ಫೆಡರರ್ ಈ ಟೂರ್ನಿಯಲ್ಲಿ ಸರ್ಗ್ಸಿಯಾನ್ ವಿರುದ್ಧ ಜಯ ಗಳಿಸಿ ಮೊದಲ ಬಾರಿ ಗ್ರಾನ್ ಸ್ಲಾಮ್ ಕ್ವಾರ್ಟರ್ ಫೈನಲ್ ತಲುಪಿದ್ದರು.