90ನೇ ಗೆಲುವು ದಾಖಲಿಸಿದ ನಡಾಲ್
ಫ್ರೆಂಚ್ ಓಪನ್
ಪ್ಯಾರಿಸ್, ಜೂ.3: ಹಾಲಿ ಚಾಂಪಿಯನ್ ರಫೆಲ್ ನಡಾಲ್ 13ನೇ ಬಾರಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಮೆಂಟ್ನಲ್ಲಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದರು. ಟೂರ್ನಿಯಲ್ಲಿ ಅವರು ಗಳಿಸಿದ 90ನೇ ಗೆಲುವು ಇದಾಗಿದೆ.
ಇಲ್ಲಿ ರವಿವಾರ ನಡೆದ ಪುರುಷರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ನಡಾಲ್ ಅರ್ಜೆಂಟೀನದ ಜುಯಾನ್ ಇಗ್ನಾಸಿಯೊ ಲಂಡೆರೊ ವಿರುದ್ಧ 6-2, 6-3, 6-3 ಅಂತರದಿಂದ ಗೆಲುವು ಸಾಧಿಸಿದರು. 32ರ ಹರೆಯದ ಸ್ಪೇನ್ ಆಟಗಾರ ನಡಾಲ್ 12ನೇ ಬಾರಿ ಫ್ರೆಂಚ್ ಓಪನ್ ಟೆನಿಸ್ ಪ್ರಶಸ್ತಿ ಗೆಲ್ಲುವತ್ತ ಚಿತ್ತವಿರಿಸಿದ್ದಾರೆ. ಗ್ರಾನ್ಸ್ಲಾಮ್ ಟೂರ್ನಿಯಲ್ಲಿ 32ನೇ ಬಾರಿ ಅಂತಿಮ-8ರ ಘಟ್ಟ ಪ್ರವೇಶಿಸಿರುವ ನಡಾಲ್ ಸೆಮಿ ಫೈನಲ್ನಲ್ಲಿ ಸ್ಥಾನ ಗಿಟ್ಟಿಸಲು ಮುಂದಿನ ಸುತ್ತಿನಲ್ಲಿ ಜಪಾನ್ನ ಕೀ ನಿಶಿಕೊರಿ ಅವರನ್ನು ಎದುರಿಸಲಿದ್ದಾರೆ. ನಡಾಲ್ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಕೇವಲ ಎರಡು ಬಾರಿ ಮಾತ್ರ ಸೋತಿದ್ದಾರೆ. 78ನೇ ರ್ಯಾಂಕಿನ ಲಾಂಡೆರೊ ಯಾವ ಹಂತದಲ್ಲೂ ನಡಾಲ್ರನ್ನು ಸೋಲಿಸುವ ಪ್ರಯತ್ನ ಮಾಡಲಿಲ್ಲ. ನಡಾಲ್ ಅವರು ನಿಶಿಕೊರಿ ವಿರುದ್ಧ ಆಡಿದ್ದ 12 ಪಂದ್ಯಗಳಲ್ಲಿ 10ರಲ್ಲಿ ಜಯ ಸಾಧಿಸಿದ್ದು, ಪೈರ್ ವಿರುದ್ಧ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ.