ಸಿಂಧು, ಸಮೀರ್ಗೆ ಸೋಲು
ಆಸ್ಟ್ರೇಲಿಯನ್ ಓಪನ್
ಸಿಡ್ನಿ, ಜೂ.6: ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ವಿಜೇತ ಪಿ.ವಿ.ಸಿಂಧು ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ನೇರ ಗೇಮ್ಗಳಿಂದ ಸೋಲನುಭವಿಸಿದ್ದಾರೆ. ಟೂರ್ನಿಯಲ್ಲಿ ಭಾರತದ ಇತರ ಶಟ್ಲರ್ಗಳು ಕಳಪೆ ಪ್ರದರ್ಶನ ನೀಡಿದ್ದಾರೆ. ಸಿಂಧು ಸೋತ ಬೆನ್ನಿಗೇ ಸಮೀರ್ ವರ್ಮಾ, ಬಿ.ಸಾಯಿ ಪ್ರಣೀತ್ ಹಾಗೂ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾನಿಕ್ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಮನೆಯ ಹಾದಿ ಹಿಡಿದರು.
ಈ ಋತುವಿನಲ್ಲಿ ಇನ್ನಷ್ಟೇ ಪ್ರಶಸ್ತಿ ಗೆಲ್ಲಬೇಕಾಗಿರುವ ವಿಶ್ವದ ನಂ.5ನೇ ಆಟಗಾರ್ತಿ ಸಿಂಧು 49 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ 29ನೇ ರ್ಯಾಂಕಿನ ನಿಚಾಯೊನ್ ಜಿಂದಾಪಾಲ್ ವಿರುದ್ಧ 19-21, 18-21 ಅಂತರದಿಂದ ಶರಣಾದರು. ಸಿಂಧು ಥಾಯ್ಲೆಂಡ್ ಆಟಗಾರ್ತಿಯ ವಿರುದ್ಧ ಆಡಿರುವ 7 ಪಂದ್ಯಗಳ ಪೈಕಿ ಎರಡನೇ ಬಾರಿ ಸೋತಿದ್ದಾರೆ.
ಇದಕ್ಕೂ ಮೊದಲು ನಡೆದ ಪುರುಷರ ಸಿಂಗಲ್ಸ್ನಲ್ಲಿ ವಿಶ್ವದ ನಂ.12ನೇ ಆಟಗಾರ ಸಮೀರ್ ಮಾಜಿ ನಂ.10ನೇ ಆಟಗಾರ ವಾಂಗ್ ಝು ವೀ ಎದುರು 16-21, 21-7, 13-21 ಗೇಮ್ಗಳಿಂದ ಸೋತಿದ್ದಾರೆ.
ಪ್ರಣೀತ್ 42 ನಿಮಿಷಗಳ ಹಣಾಹಣಿಯಲ್ಲಿ ಅಂಥೋನಿ ಸಿನಿಸುಕಾ ವಿರುದ್ಧ ಮೊದಲ ಗೇಮ್ನಲ್ಲಿ ದಿಟ್ಟ ಪ್ರದರ್ಶನ ನೀಡಿದರೂ ಅಂತಿಮವಾಗಿ 23-25, 9-21 ಅಂತರದಿಂದ ಶರಣಾದರು.
ಪುರುಷರ ಡಬಲ್ಸ್ನ ನಿಕಟ ಪೈಪೋಟಿಯಲ್ಲಿ ಸಾತ್ವಿಕ್ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಎರಡನೇ ಶ್ರೇಯಾಂಕದ ಲಿ ಜುನ್ಹ್ಯು ಹಾಗೂ ಲಿಯು ಯುಚೆನ್ ವಿರುದ್ಧ 19-21, 18-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.