ಜೇಸನ್ ರಾಯ್ ಗೆ ಗಾಯದ ಸಮಸ್ಯೆ: ಮುಂದಿನ ಎರಡು ಪಂದ್ಯಕ್ಕೆ ಅಲಭ್ಯ
ಜೇಸನ್ ರಾಯ್ಗೆ ಗಾಯದ ಸಮಸ್ಯೆ ಮ್ಯಾಂಚೆಸ್ಟರ್, ಜೂ.17: ಎಡ ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ಇಂಗ್ಲೆಂಡ್ನ ಆರಂಭಿಕ ಆಟಗಾರ ಜೇಸನ್ ರಾಯ್ ಮುಂದಿನ ಎರಡು ವಿಶ್ವಕಪ್ ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಸೋಮವಾರ ತಿಳಿಸಿದೆ.
ವೆಸ್ಟ್ಇಂಡೀಸ್ ವಿರುದ್ಧ ಶುಕ್ರವಾರ ನಡೆದ ಪಂದ್ಯದ ವೇಳೆ ಫೀಲ್ಡಿಂಗ್ ನಡೆಸುತ್ತಿದ್ದಾಗ ರಾಯ್ಗೆ ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಮಂಗಳವಾರ ಅಫ್ಘಾನಿಸ್ತಾನ ವಿರುದ್ಧ ನಡೆಯುವ ಗ್ರೂಪ್ ಪಂದ್ಯ ಹಾಗೂ ಶುಕ್ರವಾರ ಹೆಡ್ಡಿಂಗ್ಲೆಯಲ್ಲಿ ನಡೆಯುವ ಶ್ರೀಲಂಕಾ ವಿರುದ್ಧ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ.
ಇದೇ ವೇಳೆ, ವಿಂಡೀಸ್ ವಿರುದ್ಧ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದಾಗ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ಗೆ ಬೆನ್ನುನೋವು ಕಾಣಿಸಿಕೊಂಡಿತ್ತು. ಆ ಪಂದ್ಯದಲ್ಲಿ ಮೊರ್ಗನ್ ಬ್ಯಾಟಿಂಗ್ಮಾಡಿರಲಿಲ್ಲ. ಅಫ್ಘಾನಿಸ್ತಾನ ವಿರುದ್ಧ ಪಂದ್ಯಕ್ಕೆ ಮೊದಲು ಅವರು ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ.
ಈ ವರ್ಷಾರಂಭದಲ್ಲಿ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ರಾಯ್ಗೆ ಸ್ನಾಯು ಸೆಳೆತ ಕಾಣಿಸಿಕೊಂಡಿತ್ತು. ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ರಾಯ್ ಅರ್ಧಶತಕ ದಾಖಲಿಸಿದ್ದರು. ಬಾಂಗ್ಲಾದೇಶ ವಿರುದ್ಧ 153 ರನ್ ಗಳಿಸಿ ತಂಡದ ಗೆಲುವಿಗೆ ನೆರವಾಗಿದ್ದರು.ಆದರೆ, ಪಾಕಿಸ್ತಾನ ವಿರುದ್ಧ ಟ್ರೆಂಟ್ಬ್ರಿಡ್ಜ್ ನಲ್ಲಿ ಇಂಗ್ಲೆಂಡ್ ತಂಡ ಅಚ್ಚರಿಯ ಸೋಲು ಕಂಡ ಪಂದ್ಯದಲ್ಲಿ ಕೇವಲ 14 ರನ್ ಗಳಿಸಿದ್ದರು. ರೂಟ್ ವೆಸ್ಟ್ಇಂಡೀಸ್ ವಿರುದ್ಧ ಪಂದ್ಯದಲ್ಲಿ ಜಾನಿ ಬೈರ್ಸ್ಟೋವ್ರೊಂದಿಗೆ ಇನಿಂಗ್ಸ್ ಆರಂಭಿಸಿದ್ದು, ಟೆಸ್ಟ್ ನಾಯಕ ರೂಟ್ ಔಟಾಗದೆ ಶತಕ ಗಳಿಸಿದ್ದರು.