ವಿಶ್ವಕಪ್: ಕಿವೀಸ್ ಕಿವಿ ಹಿಂಡಿದ ಪಾಕ್ಗೆ 6 ವಿಕೆಟ್ ಜಯ
ಬಾಬರ್ ಆಝಂ 10ನೇ ಶತಕ, ಸೊಹೈಲ್ ಅರ್ಧಶತಕ
ಬರ್ಮಿಂಗ್ಹ್ಯಾಮ್, ಜೂ.26: ಬಾಬರ್ ಆಝಂ(ಔಟಾಗದೆ 101) ಹಾಗೂ ಹಾರಿಸ್ ಸೊಹೈಲ್(68)ಸಾಹಸದ ನೆರವಿನಿಂದ ಪಾಕಿಸ್ತಾನ ತಂಡ ನ್ಯೂಝಿಲ್ಯಾಂಡ್ ವಿರುದ್ಧದ ವಿಶ್ವಕಪ್ನ 33ನೇ ಪಂದ್ಯದಲ್ಲಿ 6 ವಿಕೆಟ್ಗಳ ಅಂತರದ ಗೆಲುವು ದಾಖಲಿಸಿದೆ.
ಗೆಲ್ಲಲು 238 ರನ್ ಗುರಿ ಪಡೆದ ಪಾಕ್ ತಂಡ 49.1 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 241 ರನ್ ಗಳಿಸಿತು.
ಇನಿಂಗ್ಸ್ ಪೂರ್ತಿ ಆಡಿದ ಆಝಂ 124 ಎಸೆತಗಳಲ್ಲಿ 11 ಬೌಂಡರಿಗಳ ಸಹಾಯದಿಂದ 10ನೇ ಶತಕ ಪೂರೈಸಿದರು. ಆಝಂಗೆ ಸಮರ್ಥ ಸಾಥ್ ನೀಡಿದ ಸೊಹೈಲ್(68 ರನ್, 76 ಎಸೆತ, 5 ಬೌಂಡರಿ, 2 ಸಿಕ್ಸರ್)4ನೇ ವಿಕೆಟ್ ಜೊತೆಯಾಟದಲ್ಲಿ 126 ರನ್ ಸೇರಿಸಿ ತಂಡಕ್ಕೆ ಇನ್ನೂ 5 ಎಸೆತ ಬಾಕಿ ಇರುವಾಗಲೇ ಗೆಲುವು ತಂದರು.
ಈ ಮೂಲಕ ಪಾಕ್ ತಂಡ ನ್ಯೂಝಿಲ್ಯಾಂಡ್ಗೆ ಟೂರ್ನಮೆಂಟ್ನಲ್ಲಿ ಸೋಲಿನ ರುಚಿ ಉಣಿಸಿತು. ಕಿವೀಸ್ ಟೂರ್ನಿಯಲ್ಲಿ ಆಡಿದ 7ನೇ ಪಂದ್ಯದಲ್ಲಿ ಮೊದಲ ಸೋಲು ಕಂಡಿದೆ. ಒಂದು ಪಂದ್ಯ ಮಳೆಗಾಹುತಿಯಾಗಿತ್ತು.
ಪಾಕ್ ತಂಡ ತಾನಾಡಿದ 7ನೇ ಪಂದ್ಯದಲ್ಲಿ 3ನೇ ಗೆಲುವು ದಾಖಲಿಸಿ ಸೆಮಿ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಪಾಕ್ ಇನ್ನೆರಡು ಪಂದ್ಯಗಳನ್ನು ಗೆಲ್ಲಬೇಕು.ಉಳಿದ ತಂಡಗಳ ಫಲಿತಾಂಶ ತನ್ನ ಪರವಾಗಿರುವಂತೆ ನೋಡಿಕೊಳ್ಳಬೇಕು.
ಬಾಬರ್ ಅವರು ಮುಹಮ್ಮದ್ ಹಫೀಝ್(32 ರನ್)ಅವರೊಂದಿಗೆ 3ನೇ ವಿಕೆಟ್ಗೆ 66 ರನ್ ಜೊತೆಯಾಟ ನಡೆಸಿ ತಂಡದ ಗೆಲುವಿಗೆ ಮುನ್ನುಡಿ ಬರೆದರು.
ನಾಯಕ ವಿಲಿಯಮ್ಸನ್ ತಾನು ಒಳಗೊಂಡಂತೆ 8 ಬೌಲರ್ಗಳನ್ನು ದಾಳಿಗಿಳಿಸಿದರೂ ಪಾಕಿಸ್ತಾನವನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ.