ವಿಂಬಲ್ಡನ್ 4ನೇ ಸುತ್ತು ತಲುಪಿದ ಬಾಲಕಿ ಕೋರಿ ಗೌಫ್
ಲಂಡನ್: ವಿಂಬಲ್ಡನ್ ಮೊದಲ ಸುತ್ತಿನಲ್ಲಿ ವೀನಸ್ ವಿಲಿಯಮ್ಸ್, ಎರಡನೇ ಸುತ್ತಿನಲ್ಲಿ 2017ನೇ ಸಾಲಿನ ಸೆಮಿಫೈನಲಿಸ್ಟ್ ಮ್ಯಾಗ್ದಲೇನಾ ರಿಬಾರಿಕೋವಾ ಅವರಂಥ ದೈತ್ಯರನ್ನು ಮಣಿಸಿದ 15ರ ಬಾಲಕಿ ಕೋರಿ ಗೌಫ್, ಶುಕ್ರವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಪ್ರಯಾಸದ ಜಯ ಸಾಧಿಸಿ ನಾಲ್ಕನೇ ಸುತ್ತಿಗೆ ಮುನ್ನಡೆದಿದ್ದಾರೆ.
ಮೊದಲ ಎರಡು ಪಂದ್ಯಗಳ ಪ್ರದರ್ಶನ ತೋರುವಲ್ಲಿ ವಿಫಲರಾದ ಗೌಫ್, ಪೊಲೊನಾ ಹರ್ಕಾಗ್ ವಿರುದ್ಧ 3-6, 7-6 (9/7), 7-5 ಸೆಟ್ಗಳ ಪ್ರಯಾಸದ ಜಯ ದಾಖಲಿಸಿ ಅಭಿಯಾನ ಮುಂದುವರಿಸಿದರು.
ಮೊದಲ ಸೆಟ್ ಸೋಲಿನ ಬಳಿಕ ಗೌಫ್ ಟೈಬ್ರೇಕ್ ಮೂಲಕ ಎರಡನೇ ಸೆಟ್ ಗೆದ್ದರು. 11 ವರ್ಷಗಳಿಂದ ವಿಂಬಲ್ಡನ್ ಆಡುತ್ತಿರುವ ಹೆರ್ಕೋಗ್ ಇದುವರೆಗೆ ಒಂದು ಬಾರಿಯೂ ಅಂತಿಮ 16ರ ಘಟ್ಟ ತಲುಪಿಲ್ಲ.
2 ಗಂಟೆ 47 ನಿಮಿಷ ನಡೆದ ಮ್ಯಾರಥಾನ್ ಪಂದ್ಯದ ಕೊನೆಯನ್ನು ಅಂಪೈರ್ ಘೋಷಿಸಿದಾಗ ಪೋಷಕರ ಸಮ್ಮುಖದಲ್ಲಿ ಗೌಫ್ ಗೆಲುವಿನ ನಗೆ ಬೀರಿದರು. "ಈ ಸುಧೀರ್ಘ ಪಂದ್ಯ ಕೊನೆಗೊಂಡಾಗ ನಿರಾಳ ಎನಿಸಿತು" ಎಂದು ಗೌಫ್ ಪ್ರತಿಕ್ರಿಯಿಸಿದರು.
"ಪೊಲೊನಾ ನಂಬಲಸಾಧ್ಯ ಆಟ ಪ್ರದರ್ಶಿಸಿದರು. ಸೆಂಟರ್ ಕೋರ್ಟ್ನಲ್ಲಿ ಅದು ನನ್ನ ಮೊದಲ ಪಂದ್ಯ. ಎರಡನೇ ಸೆಟ್ನಲ್ಲಿ ನಾನು ಎದಿರೇಟು ನೀಡಬಲ್ಲೆ ಎಂಬ ವಿಶ್ವಾಸ ನನಗಿತ್ತು. ಆದ್ದರಿಂದ ನನ್ನ ನೈಜ ಆಟ ಆಡಿದೆ" ಎಂದು ಹೇಳಿದರು.
ಎಂಟರ ಘಟ್ಟಕ್ಕೆ ಮುನ್ನಡೆಯಲು ಗೌಫ್ ಇದೀಗ ವಿಶ್ವದ ಮಾಜಿ ನಂಬರ್ ವನ್ ಆಟಗಾರ್ತಿ ರೊಮೇನಿಯಾದ ಸಿಮೋನಾ ಹೆಲೆಪ್ ವಿರುದ್ಧ ಸೆಣೆಸಬೇಕಿದೆ. 1991ರಲ್ಲಿ 15 ವರ್ಷದ ಜೆನ್ನಿಫರ್ ಕ್ಯಾಪ್ರಿಯಾಟಿ ವಿಂಬಲ್ಡನ್ ಸೆಮಿಫೈನಲ್ ತಲುಪಿದ್ದರು.