ಸಮುದ್ರದಲ್ಲಿ ಮುಳುಗುತ್ತಿದ್ದವನನ್ನು ರಕ್ಷಿಸಿದ ಒಲಿಂಪಿಕ್ಸ್ ಪದಕ ವಿಜೇತ ಈಜುಪಟು
ಸಾರ್ಡಿನಿಯಾ, ಜು.10: ಒಲಿಂಪಿಕ್ ಈಜುಪಟು, ಕಂಚಿನ ಪದಕ ವಿಜೇತ ಫಿಲಿಪ್ಪೊ ಮ್ಯಾಗ್ನಿನಿ ಸಾರ್ಡಿನಿಯಾದ ಕಾಲಾ ಸಿನ್ಝಿಯಾಸ್ ಬೀಚ್ ನಲ್ಲಿ ಅಲೆಗಳ ಸೆಳೆತಕ್ಕೆ ಸಿಲುಕಿ ಮುಳುಗುತ್ತಿದ್ದ ವ್ಯಕ್ತಿಯೊಬ್ಬರ ಪ್ರಾಣ ಉಳಿಸಿದ್ದಾರೆ.
ಒಲಿಂಪಿಕ್ಸ್ ಕಂಚಿನ ಪದಕ ವಿಜೇತರಾಗಿರುವ ಫಿಲಿಪ್ಪೊ (37) ಅವರು ತಮ್ಮ ಗೆಳತಿ ಹಾಗೂ ಟಿವಿ ನಿರೂಪಕಿ ಜಾರ್ಜಿಯಾ ಪಾಲ್ಮಾಸ್ ಜತೆ ಬೀಚ್ ನಲ್ಲಿದ್ದರು. ಅಲ್ಲಿದ್ದ ಒಬ್ಬ ವ್ಯಕ್ತಿ ನೀರಿನಲ್ಲಿ ತೇಲಿ ಹೋದ ತನ್ನ ಇನ್ಫ್ಲೇಟೇಬಲ್ ಅನ್ನು ಕೈಗೆತ್ತಿಕೊಳ್ಳಲು ಹೋದಾಗ ನೀರಿನ ಸೆಳೆತಕ್ಕೆ ಸಿಲುಕಿದ್ದರು. ತಕ್ಷಣ ಆತನ ಸಹಾಯಕ್ಕೆ ಧಾವಿಸಿದ್ದ ಫಿಲಿಪ್ಪೋ ಅಲ್ಲಿಗೆ ಜೀವರಕ್ಷಕರು ಆಗಮಿಸುವ ತನಕ ಆ ವ್ಯಕ್ತಿಯ ತಲೆಯನ್ನು ನೀರಿನಿಂದ ಮೇಲೆತ್ತಿ ಆತನ ಜೀವಕ್ಕೆ ಅಪಾಯವಾಗದಂತೆ ನೋಡಿಕೊಂಡಿದ್ದರು.
“ನಾನು ಮಾಡಬೇಕಾಗಿದ್ದನ್ನು ಮಾಡಿದೆ. ಆ ವ್ಯಕ್ತಿ ತೊಂದರೆಯಲ್ಲಿದ್ದ ಹಾಗೂ ಹೆದರಿ ಹೋಗಿದ್ದ. ಸಮುದ್ರದ ಸ್ವಲ್ಪ ಉಪ್ಪು ನೀರು ಆತನ ಹೊಟ್ಟೆಯನ್ನು ಸೇರಿತ್ತು, ಆತ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಆತನನ್ನು ದೋಣಿಯೊಳಕ್ಕೆ ಹಾಕುವುದೂ ಅಷ್ಟು ಸುಲಭವಾಗಿರಲಿಲ್ಲ. ಆದುದರಿಂದ ಅಲ್ಲಿನ ಕೆಲವರಲ್ಲಿದ್ದ ಏರ್ ಬೆಡ್ ನಲ್ಲಿ ಆತನನು ಮಲಗಿಸಿ ಮೇಲೆತ್ತಲಾಯಿತು” ಎಂದು ಫಿಲಿಪ್ಪೊ ವಿವರಿಸಿದ್ದಾರೆ.
2005 ಹಾಗೂ 2007ರಲ್ಲಿ ವಿಶ್ವ ಚಾಂಪಿಯನ್ಶಿಪ್ ಗೆದ್ದಿದ್ದ ಫಿಲಿಪ್ಪೊ 2004 ಅಥೆನ್ಸ್ ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದಿದ್ದರು.