ಕ್ಯಾನ್ಸರ್ ಗೆದ್ದ ಎಂಟರ ಪೋರನಿಗೆ ಟೇಬಲ್ ಟೆನಿಸ್ನಲ್ಲಿ ಚಿನ್ನದ ಪದಕ !
ವಿಶ್ವ ಮಕ್ಕಳ ವಿನ್ನರ್ಸ್ ಗೇಮ್-2019
ಕೊಲ್ಕತ್ತಾ: ಎಂಟು ವರ್ಷದ ಅರೋನ್ ಯತೇಶ್ ಗಂಗೂಲಿ ನಿಜವಾಗಿಯೂ ವಿಜೇತ. ಪಶ್ಚಿಮ ಬಂಗಾಳದ ಸೆರಾಂಪುರದ ಈ ಬಾಲಕ ಮಾಸ್ಕೊದಲ್ಲಿ ನಡೆದ ವಿಶ್ವ ಮಕ್ಕಳ ವಿನ್ನರ್ಸ್ ಗೇಮ್-2019ರ ಟೇಬಲ್ ಟೆನಿಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ರಾಜ್ಯ ಹಾಗೂ ದೇಶಕ್ಕೆ ಹೆಮ್ಮೆ ತಂದಿದ್ದಾನೆ. ಇಷ್ಟು ಮಾತ್ರವಲ್ಲ ಈ ಅದ್ಭುತ ಬಾಲಕ ಕ್ಯಾನ್ಸರ್ ಗೆದ್ದ ಪೋರ !
ಜು. 4 ರಿಂದ 7ರವರೆಗೆ ಕ್ಯಾನ್ಸರ್ ವಿಜೇತ ಮಕ್ಕಳಿಗಾಗಿ ನಡೆದ ಅಂತರ್ ರಾಷ್ಟ್ರೀಯ ಕೂಟದಲ್ಲಿ ಅರೋನ್ ಯತೇಶ್ ಈ ಸಾಧನೆ ಮಾಡಿದ್ದಾನೆ. "ಕ್ಯಾನ್ಸರ್ನ ಎಲ್ಲ ನೋವುಗಳನ್ನು ಮರೆತ ಬಾಲಕ ಅದ್ಭುತ ಸಾಧನೆ ಮಾಡಿದ್ದಾನೆ" ಎಂದು ಮಾಸ್ಕೊದಲ್ಲಿ ಆತನ ಜತೆಗಿರುವ ತಾಯಿ ಕಾವೇರಿ ಹರ್ಷ ವ್ಯಕ್ತಪಡಿಸಿದ್ದಾರೆ.
ಟ್ರ್ಯಾಕ್, ಚೆಸ್, ಫುಟ್ಬಾಲ್, ಟೇಬಲ್ ಟೆನಿಸ್, ಈಜು ಹಾಗೂ ಶೂಟಿಂಗ್ ಸ್ಪರ್ಧೆಗಳು ಇಂಥ ಕ್ಯಾನ್ಸರ್ ವಿಜೇತ ಮಕ್ಕಳಿಗಾಗಿ ನಡೆಯುತ್ತಿದೆ.
ವಿಶ್ವದ ಎಲ್ಲೆಡೆಯಿಂದ ಮಕ್ಕಳು ಭಾಗವಹಿಸಿದ ಈ ಕೂಟದಲ್ಲಿ ಭಾರತದ 10 ಪೋರರು ಭಾಗವಹಿಸಿದ್ದು, ಪಶ್ಚಿಮ ಬಂಗಾಳದಿಂದ ಭಾಗವಹಿಸಿದ ಏಕೈಕ ಬಾಲಕ ಈತ.
"ಈತ ಅತ್ಯದ್ಭುತ ಪ್ರತಿಭೆ. ಅದ್ಭುಕ ಕ್ರೀಡಾ ಕೌಶಲಗಳಿದ್ದು, ಎಲ್ಲ ಆರು ವಿಭಾಗಳಲ್ಲೂ ಸ್ಪರ್ಧಿಸಿದ್ದಾನೆ" ಎಂದು ಟಾಟಾ ಸ್ಮಾರಕ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಸಾಮಾಜಿಕ ಕಾರ್ಯಕರ್ತರಾಗಿರುವ ಅಮೀತಾ ಭಾಟಿಯಾ ಹೇಳಿದ್ದಾರೆ. ಈ ಆಸ್ಪತ್ರೆಯಲ್ಲಿ ಲ್ಯುಕೇಮಿಯಾ ರೋಗಕ್ಕಾಗಿ ಬಾಲಕನಿಗೆ ಚಿಕಿತ್ಸೆ ನೀಡಲಾಗಿತ್ತು.
2016ರ ಏಪ್ರಿಲ್ನಲ್ಲಿ ಲ್ಯುಕೋಮಿಯಾದಿಂದ ಈತ ಬಳಲುತ್ತಿರುವುದು ಪತ್ತೆಯಾಗಿತ್ತು. 11 ತಿಂಗಳು ಚಿಕಿತ್ಸೆಗಾಗಿ ಮುಂಬೈನಲ್ಲಿ ಉಳಿದಿದ್ದ ಈತ ಹಲವು ಸುತ್ತುಗಳ ಕಿಮೊಥೆರಪಿ ಹಾಗೂ ಔಷಧಿಗಳ ಬಳಿಕ 2018ರ ಡಿಸೆಂಬರ್ನಲ್ಲಿ ಕ್ಯಾನ್ಸರ್ ಮುಕ್ತನಾಗಿದ್ದ. ಮತ್ತೆ ಮರುಕಳಿಸದಂತೆ ಮುಂಜಾಗ್ರತಾ ಕ್ರಮವಾಗಿ ನಿಯತವಾಗಿ ತಪಾಸಣೆಗೆ ಗುರಿಪಡಿಸಲಾಗುತ್ತಿದೆ. ಚಿಕಿತ್ಸೆ ಪಡೆಯುತ್ತಿರುವ ಅವಧಿಯಲ್ಲಿ ವೈದ್ಯರು ಹಾಗೂ ಕಾರ್ಯಕರ್ತರು ಈತನ ಕ್ರೀಡಾ ಪ್ರೇಮವನ್ನು ಪತ್ತೆ ಮಾಡಿದ್ದರು. ಕಾಯಂ ತಪಾಸಣೆಯ ಬಳಿಕ ಕಳೆದ ಎರಡು ತಿಂಗಳಿಂದ ಪ್ರತಿದಿನ ಅಭ್ಯಾಸ ಮಾಡುತ್ತಿದ್ದ.
"ಮುಂಜಾನೆ 5.30ಕ್ಕೆ ಎದ್ದು, 6ರಿಂದ 7.30ರ ತನಕ ಟ್ರ್ಯಾಕ್ ಮತ್ತು ಫುಟ್ಬಾಲ್ ಅಭ್ಯಾಸಕ್ಕೆ ತೆರಳುತ್ತಿದ್ದ. ಬಳಿಕ ಈಜು, ಚೆಸ್ ಹಾಗೂ ಟೆನಿಸ್ ಅಭ್ಯಸಿಸುತ್ತಿದ್ದ. ಸಂಜೆ ಶೂಟಿಂಗ್ ತರಬೇತಿಗೆ ಹೋಗುತ್ತಿದ್ದ" ಎಂದು ಕಾವೇರಿ ವಿವರಿಸಿದ್ದಾರೆ.