ಪಾಕಿಸ್ತಾನದ ಮುಖ್ಯ ಆಯ್ಕೆಗಾರನ ಹುದ್ದೆ ತ್ಯಜಿಸಿದ ಇಂಝಮಾಮ್ವುಲ್ ಹಕ್
ಕರಾಚಿ, ಜು.18: ಪಾಕಿಸ್ತಾನದ ಮುಖ್ಯ ಆಯ್ಕೆಗಾರನ ಹುದ್ದೆ ತ್ಯಜಿಸುವೆ ಎಂದು ಬುಧವಾರ ಇಂಝಮಾಮ್ವುಲ್ ಹಕ್ ಘೋಷಿಸಿದರು. 2016ರ ಎಪ್ರಿಲ್ನಲ್ಲಿ ಈ ಹುದ್ದೆಗೆ ನೇಮಕಗೊಂಡಿದ್ದ ಹಕ್ ಒಪ್ಪಂದದ ಅವಧಿಯು ಜು.31ಕ್ಕೆ ಕೊನೆಗೊಳ್ಳಲಿದೆ.
ಇಂಝಮಾಮ್ ಈ ವರ್ಷದ ವಿಶ್ವಕಪ್ಗೆ ಪಾಕ್ ತಂಡವನ್ನು ಆಯ್ಕೆ ಮಾಡಿರುವುದು ಅವರ ಕೊನೆಯ ಕೆಲಸವಾಗಿದೆ. ಸರ್ಫರಾಝ್ ಅಹ್ಮದ್ ನೇತೃತ್ವದ ಪಾಕ್ ತಂಡ ವಿಶ್ವಕಪ್ನ ಗ್ರೂಪ್ ಹಂತದಲ್ಲಿ 5ನೇ ಸ್ಥಾನ ಪಡೆಯುವುದರೊಂದಿಗೆ ಸೆಮಿ ಫೈನಲ್ಗೆ ಅರ್ಹತೆ ಪಡೆಯಲು ವಿಫಲವಾಗಿತ್ತು.
‘‘ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯಲ್ಲಿ ಮೂರು ವರ್ಷಕ್ಕೂ ಅಧಿಕ ಕಾಲ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿರುವ ತಾನು ಮತ್ತೆ ಒಪ್ಪಂದವನ್ನು ಮುಂದುವರಿಸದೇ ಇರಲು ನಿರ್ಧರಿಸಿದ್ದೇನೆ’’ ಎಂದು 49ರ ಹರೆಯದ ಹಕ್ ತಿಳಿಸಿದ್ದಾರೆ.
‘‘ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೆಪ್ಟಂಬರ್ನಲ್ಲಿ ನಡೆಯಲಿದೆ. 2020ರಲ್ಲಿ ಐಸಿಸಿ ಟಿ-20 ವಿಶ್ವಕಪ್ ಹಾಗೂ 2023ರಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ನಡೆಯಲಿದೆ. ಹೊಸ ಯೋಚನೆ ಹಾಗೂ ಹೊಸ ಚಿಂತನೆ ಇರುವ ನೂತನ ಮುಖ್ಯ ಆಯ್ಕೆಗಾರರನ್ನು ನೇಮಿಸುವುದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಇದು ಸರಿಯಾದ ಸಮಯ’’ ಎಂದು ಹಕ್ ಹೇಳಿದ್ದಾರೆ.
ಇಂಝಾಮಾಮ್ ಆಯ್ಕೆ ಸಮಿತಿ ಅಧ್ಯಕ್ಷರಾದ ಬಳಿಕ ಫಕಾರ್ ಝಮಾನ್, ಹಸನ್ ಅಲಿ, ಇಮಾಮ್ವುಲ್ ಹಕ್, ಮುಹಮ್ಮದ್ ಅಬ್ಬಾಸ್, ಶಾದಾಬ್ ಖಾನ್, ಶಾಹೀನ್ ಅಫ್ರಿದಿ ಹಾಗೂ ಉಸ್ಮಾನ್ ಶಿನ್ವಾರಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ಬಾಬರ್ ಆಝಂ ಎಲ್ಲ ಮೂರು ಮಾದರಿ ಕ್ರಿಕೆಟ್ನಲ್ಲಿ ತನ್ನ ಛಾಪು ಮೂಡಿಸಿದ್ದರು.