ಐಪಿಎಲ್: ಪಂಜಾಬ್ ತಂಡಕ್ಕೆ ಹಾಶಿಮ್ ಅಮ್ಲ ಸೇರ್ಪಡೆ
ಮೊಹಾಲಿ, ಮೇ 4: ದಕ್ಷಿಣ ಆಫ್ರಿಕದ ಹಿರಿಯ ದಾಂಡಿಗ ಹಾಶಿಮ್ ಅಮ್ಲ ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಸೇರ್ಪಡೆಯಾಗಲಿದ್ದಾರೆ.
ಆಸ್ಟ್ರೇಲಿಯದ ಬ್ಯಾಟ್ಸ್ಮನ್ ಶಾನ್ ಮಾರ್ಷ್ ಎ.19 ರಂದು ನಡೆದ ಕೆಕೆಆರ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಬೆನ್ನುನೋವು ಕಾಣಿಸಿಕೊಂಡಿತ್ತು. ಈ ಕಾರಣದಿಂದ ಅವರು ಐಪಿಎಲ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಮಾರ್ಷ್ರಿಂದ ತೆರವಾದ ಸ್ಥಾನವನ್ನು ಆಫ್ರಿಕದ ಟೆಸ್ಟ್ ಕ್ರಿಕೆಟ್ ಸ್ಪೆಷಲಿಸ್ಟ್ ಅಮ್ಲ ತುಂಬಲು ಸಜ್ಜಾಗಿದ್ದಾರೆ.
32ರ ಹರೆಯದ ಅಮ್ಲ ಫೆಬ್ರವರಿಯಲ್ಲಿ ನಡೆದಿದ್ದ ಐಪಿಎಲ್ ಆಟಗಾರರ ಹರಾಜಿನ ವೇಳೆ ಎಲ್ಲ ಫ್ರಾಂಚೈಸಿಗಳಿಂದಲೂ ನಿರ್ಲಕ್ಷಿಸಲ್ಪಟ್ಟಿದ್ದರು. ಅಮ್ಲ ಇನ್ನಷ್ಟೇ ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಪಂದ್ಯವನ್ನು ಆಡಬೇಕಾಗಿದೆ.
ಈ ವರ್ಷಾರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯ ನಡೆಯುತ್ತಿರುವಾಗಲೇ ದಕ್ಷಿಣ ಆಫ್ರಿಕದ ಟೆಸ್ಟ್ ಕ್ರಿಕೆಟ್ ನಾಯಕತ್ವವನ್ನು ತ್ಯಜಿಸಿದ್ದ ಅಮ್ಲ 88 ಟ್ವೆಂಟಿ-20 ಪಂದ್ಯಗಳಲ್ಲಿ 31.35ರ ಸರಾಸರಿಯಲ್ಲಿ 2,446 ರನ್ ಗಳಿಸಿದ್ದಾರೆ.