ಸಾತ್ವಿಕ್ಸಾಯಿರಾಜ್-ಅಶ್ವಿನಿ ಪೊನ್ನಪ್ಪ ಶುಭಾರಂಭ
ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ
ಚಾಂಗ್ಝೌ(ಚೀನಾ), ಸೆ.17: ಭಾರತದ ಮಿಕ್ಸೆಡ್ ಡಬಲ್ಸ್ ಜೋಡಿ ಸಾತ್ವಿಕ್ಸಾಯಿರಾಜ್ ರಾನಿಕ್ರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಇಂಡೋನೇಶ್ಯದ ವಿಶ್ವದ ನಂ.7ನೇ ಜೋಡಿ ಪ್ರವೀಣ್ ಜೋರ್ಡನ್ ಹಾಗೂ ಮೆಲಾಟಿ ದಾವಾ ಒಕ್ಟಾವಿಯಾಂಟಿ ಅವರನ್ನು ಮೊದಲ ಸುತ್ತಿನಲ್ಲಿ ಮಣಿಸಿ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಶುಭಾರಂಭ ಮಾಡಿದರು.
ಇಲ್ಲಿ ಮಂಗಳವಾರ 50 ನಿಮಿಷಗಳ ಕಾಲ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.26ನೇ ಜೋಡಿ ಸಾತ್ವಿಕ್ ಹಾಗೂ ಅಶ್ವಿನಿ ಇಂಡೋನೇಶ್ಯದ ಆರನೇ ಶ್ರೇಯಾಂಕದ ಜೋಡಿ ಪ್ರವೀಣ್-ಮೆಲಾಟಿ ಅವರನ್ನು 22-20, 17-21, 21-17 ಗೇಮ್ಗಳ ಅಂತರದಿಂದ ಮಣಿಸಿದರು.
2018ರ ಇಂಡಿಯಾ ಓಪನ್ ಸೇರಿದಂತೆ ಪ್ರವೀಣ್ ಜೋರ್ಡನ್ ಹಾಗೂ ಮೆಲಾಟಿ ಈ ತನಕ ಐದು ಬಾರಿ ಫೈನಲ್ಗೆ ತಲುಪಿದ್ದಾರೆ. ಇಂದಿನ ಪಂದ್ಯದಲ್ಲಿ ಭಾರತದ ಜೋಡಿಯ ಒತ್ತಡಕ್ಕೆ ಮಣಿದಿದ್ದಾರೆ. ಅಶ್ವಿನಿ ಹಾಗೂ ಸಾತ್ವಿಕ್ ಮುಂದಿನ ಸುತ್ತಿನಲ್ಲಿ ಜಪಾನ್ನ ಯುಕಿ ಕನೆಕೊ ಹಾಗೂ ಮಿಸಾಕಿ ಮಟ್ಸುಟೊಮೊ ಅಥವಾ ಐರ್ಲೆಂಡ್ನ ಸಹೋದರ-ಸಹೋದರಿಯರಾದ ಸ್ಯಾಮ್ ಮ್ಯಾಗೀ ಹಾಗೂ ಚೊಯ್ ಮ್ಯಾಗೀ ಅವರನ್ನು ಎದುರಿಸಲಿದ್ದಾರೆ.