ಒಲಿಂಪಿಕ್ಸ್ ಕ್ವಾಲಿಫೈಯರ್ ತಂಡದಲ್ಲಿ ಬಾಕ್ಸರ್ಗಳಾದ ಅಮಿತ್, ಮನೀಶ್ಗೆ ಸ್ಥಾನ
ಎಕಟೆರಿನ್ಬರ್ಗ್(ರಶ್ಯ), ಸೆ.19: ಈಗ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಪದಕವನ್ನು ಖಚಿತಪಡಿಸಿರುವ ಅಮಿತ್ ಪಾಂಘಾಲ್(52ಕೆಜಿ) ಹಾಗೂ ಮನೀಶ್ ಕೌಶಿಕ್(63ಕೆಜಿ)ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್ ಕ್ವಾಲಿಫೈಯರ್ಗೆ ಭಾರತೀಯ ಬಾಕ್ಸಿಂಗ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಅಮಿತ್ ಹಾಗೂ ಕೌಶಿಕ್ ಸೆಮಿಫೈನಲ್ಗೆ ತಲುಪಿದ್ದಾರೆ. ಇದೇ ಮೊದಲ ಬಾರಿ ಭಾರತದ ಬಾಕ್ಸರ್ಗಳು ವಿಶ್ವ ಚಾಂಪಿಯನ್ಶಿಪ್ನಲ್ಲಿ ಒಂದಕ್ಕಿಂತ ಹೆಚ್ಚು ಪದಕವನ್ನು ದೃಢಪಡಿಸಿದ್ದಾರೆ.
ವಿಶ್ವ ಚಾಂಪಿಯನ್ಶಿಪ್ನಲ್ಲಿ ಪದಕ ಗೆಲ್ಲುವ ಬಾಕ್ಸರ್ಗಳು ಚೀನಾದಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ವಾಲಿಫೈಯರ್ಗೆ ಸಹಜವಾಗಿಯೇ ಆಯ್ಕೆಯಾಗಲಿದ್ದಾರೆ ಎಂದು ಭಾರತ ಬಾಕ್ಸಿಂಗ್ ಒಕ್ಕೂಟ(ಬಿಎಫ್ಐ)ಸ್ಪಷ್ಟಪಡಿಸಿದೆ.
‘‘ಹೌದು, ಅಮಿತ್ ಹಾಗೂ ಮನೀಶ್ ಕ್ವಾಲಿಫೈಯರ್ ಸುತ್ತಿನಲ್ಲಿ ಆಡಲಿದ್ದಾರೆ. ಈ ಇಬ್ಬರು ತಮ್ಮ ತೂಕ ವಿಭಾಗದಲ್ಲಿ ಯಾವುದೇ ಟ್ರಯಲ್ಸ್ನಲ್ಲಿ ಭಾಗವಹಿಸುವುದಿಲ್ಲ. ಉಳಿದ ತಂಡವನ್ನು ಶಿಬಿರದ ಪ್ರದರ್ಶನ, ಅಂತರ್ರಾಷ್ಟ್ರೀಯ ಟೂರ್ನಿಗಳಲ್ಲಿ ಗಳಿಸಿರುವ ಅಂಕ, ಇನ್ನು ಕೆಲವೊಮ್ಮೆ ಟ್ರಯಲ್ಸ್ ಮೂಲಕ ಆಯ್ಕೆ ಮಾಡಲಾಗುತ್ತದೆ’’ ಎಂದು ಭಾರತೀಯ ಬಾಕ್ಸಿಂಗ್ನ ಉನ್ನತ ಪ್ರದರ್ಶನ ನಿರ್ದೇಶಕ ಸ್ಯಾಂಟಿಯಾಗೊ ನೀವಾ ಹೇಳಿದ್ದಾರೆ.