ಐಸಿಸಿ ಪ್ರಕಾರ ರಾಹುಲ್ ದ್ರಾವಿಡ್ ಎಡಗೈ ಬ್ಯಾಟ್ಸ್ಮನ್ !
ಹೊಸದಿಲ್ಲಿ, ಸೆ.20: ಐಸಿಸಿ ತನ್ನ ವೆಬ್ಸೈಟ್ನ ಹಾಲ್ ಆಫ್ ಫೇಮ್ ಪುಟದಲ್ಲಿ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ರನ್ನು ಎಡಗೈ ಬ್ಯಾಟ್ಸ್ಮನ್ ಎಂದು ನಮೂದಿಸುವ ಮೂಲಕ ಮತ್ತೊಂದು ಯಡವಟ್ಟು ಮಾಡಿದೆ.
ದ್ರಾವಿಡ್ ಕಳೆದ ವರ್ಷ ಆಸ್ಟ್ರೇಲಿಯದ ದಂತಕತೆ ರಿಕಿ ಪಾಂಟಿಂಗ್ ಹಾಗೂ ಇಂಗ್ಲೆಂಡ್ನ ಮಹಿಳಾ ಆಟಗಾರ್ತಿ ಕ್ಲೈರ್ ಟೇಲರ್ ಜೊತೆಗೆ ಜುಲೈನಲ್ಲಿ ಡಬ್ಲಿನ್ನಲ್ಲಿ ನಡೆದ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಹಾಲ್ ಆಫ್ ಫೇಮ್ಗೆ ಸೇರ್ಪಡೆಯಾಗಿದ್ದರು. ಈ ಗೌರವಕ್ಕೆ ಪಾತ್ರವಾದ ಭಾರತದ ಐದನೇ ಕ್ರಿಕೆಟಿಗ ಎನಿಸಿಕೊಂಡಿದ್ದರು. ತನ್ನ ವೆಬ್ಸೈಟ್ ಪೇಜ್ನಲ್ಲಿ ಸರಿಯಾದ ಪರಿಶೀಲನೆ ನಡೆಸಲು ಮರೆತಿರುವ ಐಸಿಸಿ, ಭಾರತೀಯ ಬ್ಯಾಟಿಂಗ್ ದಂತಕತೆ ದ್ರಾವಿಡ್ರನ್ನು ಎಡಗೈ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಸೇರಿಸಿದೆ.
ತಿರುವನಂತಪುರದಲ್ಲಿ ಭಾರತ ಹಾಗೂ ವೆಸ್ಟ್ಇಂಡೀಸ್ ಮಧ್ಯೆ ನಡೆದಿದ್ದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದ ವೇಳೆ ದ್ರಾವಿಡ್ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರಿಂದ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರವಾದ ಹಿನ್ನೆಲೆಯಲ್ಲಿ ಸ್ಮರಣಾರ್ಥ ಕ್ಯಾಪ್ನ್ನು ಸ್ವೀಕರಿಸಿದ್ದರು.
ಬಲಗೈ ಬ್ಯಾಟ್ಸ್ಮನ್ ಆಗಿದ್ದ ದ್ರಾವಿಡ್ ಭಾರತದ ಪರ 1996ರಿಂದ 2012ರ ತನಕ 164 ಟೆಸ್ಟ್ ಹಾಗೂ 344 ಏಕದಿನ ಪಂದ್ಯಗಳನ್ನು ಆಡಿದ್ದರು. ಎರಡೂ ಮಾದರಿಯ ಕ್ರಿಕೆಟ್ನಲ್ಲಿ ಒಟ್ಟು 24,177 ರನ್ ಗಳಿಸಿದ್ದರು.