ಜೈಪುರ-ಗುಜರಾತ್ ಪಂದ್ಯ ಟೈ
ಪ್ರೊ ಕಬಡ್ಡಿ ಲೀಗ್
ಜೈಪುರ, ಸೆ.21: ಆತಿಥೇಯ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಗುಜರಾತ್ ಫೋರ್ಚುನ್ ಜೈಂಟ್ಸ್ ತಂಡದ ವಿರುದ್ಧ ತವರಿನಲ್ಲಿ ಆಡಿದ 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನ ತನ್ನ ಮೊದಲ ಪಂದ್ಯದಲ್ಲಿ 28-28 ಅಂತರದಿಂದ ಟೈ ಸಾಧಿಸಿದೆ. ಉಭಯ ತಂಡಗಳು ಟೂರ್ನಿಯಲ್ಲಿ 2ನೇ ಬಾರಿ ಟೈ ಸಾಧಿಸಿವೆ.
ಲೀಗ್ನ 100ನೇ ಪಂದ್ಯದಲ್ಲಿ ಜೈಪುರ ಪರ ವಿಶಾಲ್ 9 ಹಾಗೂ ದೀಪಕ್ ಹೂಡ 4 ಅಂಕ ಗಳಿಸಿದರು. ಗುಜರಾತ್ನ ಪರ ಸಚಿನ್ ಹಾಗೂ ಪರ್ವೇಶ್ ತಲಾ 5 ಅಂಕ ಗಳಿಸಿದರು. 4ನೇ ಸ್ಥಾನದಲ್ಲಿರುವ ಗುಜರಾತ್ 17ನೇ ಪಂದ್ಯದಲ್ಲಿ 9ನೇ ಜಯ ದಾಖಲಿಸಿ 53 ಅಂಕ ಗಳಿಸಿ 4ನೇ ಸ್ಥಾನದಲ್ಲಿದೆ.
►ಯೋಧಾಕ್ಕೆ ಸುಲಭ ಜಯ
ಲೀಗ್ನ 101ನೇ ಪಂದ್ಯದಲ್ಲಿ ಯುಪಿ ಯೋಧಾ ತಂಡ ತಮಿಳ್ ತಲೈವಾಸ್ ತಂಡವನ್ನು 42-22 ಅಂಕಗಳ ಅಂತರದಿಂದ ಸುಲಭವಾಗಿ ಸೋಲಿಸಿತು.
ವಿಜೇತ ಯೋಧಾ ಪರ ಶ್ರೀಕಾಂತ್ ಜಾಧವ್ 8, ಸುರೇಂದರ್ ಗಿಲ್ 7 ಹಾಗೂ ರಿಶಾಂಕ್ ದೇವಾಡಿಗ 4 ಅಂಕ ಗಳಿಸಿದರು. ಟೂರ್ನಿಯಲ್ಲಿ ಆಡಿದ 18ನೇ ಪಂದ್ಯದಲ್ಲಿ 12ನೇ ಸೋಲು ಕಂಡಿರುವ ತಲೈವಾಸ್ ಕಳಪೆ ಪ್ರದರ್ಶನ ಮುಂದುವರಿಸಿದೆ. ತಲೈವಾಸ್ ಪರ ರಾಹುಲ್ ಚೌಧರಿ 5 ಅಂಕ ಗಳಿಸಿದರು.