ಕಿಂಗ್ ಕೊಹ್ಲಿ ವಿರಾಟ್ ದರ್ಶನ, ಭಾರತ ಬೃಹತ್ ಮೊತ್ತ
ದ್ವಿತೀಯ ಟೆಸ್ಟ್: ಟೀಮ್ ಇಂಡಿಯಾ 601/5 ಡಿಕ್ಲೇರ್
ಪುಣೆ, ಅ.11: ಏಳನೇ ದ್ವಿಶತಕ ಸಿಡಿಸಿ ದಾಖಲೆ ನಿರ್ಮಿಸಿದ ನಾಯಕ ವಿರಾಟ್ ಕೊಹ್ಲಿ ಅವರ ವಿರಾಟ್ ಪ್ರದರ್ಶನದ ನೆರವಿನಿಂದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ದ್ವಿತೀಯ ಟೆಸ್ಟ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದೆ.
ಎರಡನೇ ದಿನದಾಟವಾದ ಶುಕ್ರವಾರ ಕೊಹ್ಲಿ ಜೀವನಶ್ರೇಷ್ಠ ಔಟಾಗದೆ 254 ರನ್ ಗಳಿಸಿದರು. ರನ್ಗಳ ಪರ್ವತ ಏರಿದ ಭಾರತ ಐದು ವಿಕೆಟ್ಗಳ ನಷ್ಟಕ್ಕೆ 601 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿತು. ಏಳನೇ ಬಾರಿ ದ್ವಿಶತಕ ಸಿಡಿಸಿದ ಕೊಹ್ಲಿ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್(ತಲಾ 6 ದ್ವಿಶತಕ)ದಾಖಲೆ ಮುರಿದರು.
ಟೆಸ್ಟ್ ನಾಯಕನಾಗಿ 19ನೇ ಶತಕ ಸಿಡಿಸಿದ ಕೊಹ್ಲಿ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಿದರು. ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಟೆಸ್ಟ್ ನಾಯಕನಾಗಿ ಗರಿಷ್ಠ ಶತಕ (25)ಸಿಡಿಸಿದ ದಾಖಲೆ ನಿರ್ಮಿಸಿದ್ದಾರೆ.
ಆಲ್ರೌಂಡರ್ ರವೀಂದ್ರ ಜಡೇಜ 91 ರನ್(104 ಎಸೆತ, 8 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾದ ಬೆನ್ನಿಗೇ ನಾಯಕ ಕೊಹ್ಲಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿದರು. 2ನೇ ದಿನದಾಟದಂತ್ಯಕ್ಕೆ ದಕ್ಷಿಣ ಆಫ್ರಿಕಾ ತಂಡ ಮೊದಲ ಇನಿಂಗ್ಸ್ ನಲ್ಲಿ 36 ರನ್ಗೆ ಮೊದಲ ಮೂರು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ವೇಗದ ಬೌಲರ್ ಉಮೇಶ್ ಯಾದವ್ ಆಫ್ರಿಕಾದ ಇಬ್ಬರು ಆರಂಭಿಕರಾದ ಡಿಯನ್ ಎಲ್ಗರ್(6) ಹಾಗೂ ಏಡೆನ್ ಮರ್ಕರಮ್(0) ವಿಕೆಟ್ಗಳನ್ನು ಉರುಳಿಸಿದರು. ಮುಹಮ್ಮದ್ ಶಮಿ ಅವರು ಟೆಂಬಾ ಬವುಮಾಗೆ(8)ಪೆವಿಲಿಯನ್ ಹಾದಿ ತೋರಿಸಿದರು.
ಇದಕ್ಕೂ ಮೊದಲು ಭಾರತ 3 ವಿಕೆಟ್ ನಷ್ಟಕ್ಕೆ 273ರನ್ನಿಂದ ಮೊದಲ ಇನಿಂಗ್ಸ್ ಮುಂದುವರಿಸಿತು. ಕೊಹ್ಲಿ 63 ಹಾಗೂ ರಹಾನೆ 18 ರನ್ನಿಂದ ತಮ್ಮ ಬ್ಯಾಟಿಂಗ್ ಆರಂಭಿಸಿದರು. ಬೆಳಗ್ಗಿನ ಅವಧಿಯಲ್ಲಿ ವೆರ್ನಾನ್ ಫಿಲ್ಯಾಂಡರ್ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ ಕೊಹ್ಲಿ ಭಾರತದ ನಾಯಕನಾಗಿ 26ನೇ ಹಾಗೂ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ 69ನೇ ಶತಕ ಪೂರೈಸಿದರು. 336 ಎಸೆತಗಳ ಮ್ಯಾರಥಾನ್ ಇನಿಂಗ್ಸ್ನಲ್ಲಿ ಕೊಹ್ಲಿ ಬ್ಯಾಟ್ನಿಂದ 33 ಬೌಂಡರಿಗಳು ಹಾಗೂ ಎರಡು ಸಿಕ್ಸರ್ಗಳು ಸಿಡಿದವು. ಭಾರತ ಇನಿಂಗ್ಸ್ ನಲ್ಲಿ ಬೌಲಿಂಗ್ ಮಾಡಲ್ಪಟ್ಟ 156.3 ಓವರ್ಗಳ ಪೈಕಿ 56 ಓವರ್ಗಳನ್ನು ಕೊಹ್ಲಿ ಒಬ್ಬರೇ ಎದುರಿಸಿದರು.
ಉಪ ನಾಯಕ ಅಜಿಂಕ್ಯ ರಹಾನೆ(59, 168 ಎಸೆತ, 8 ಬೌಂಡರಿ) ಜೊತೆ 4ನೇ ವಿಕೆಟ್ ಜೊತೆಯಾಟದಲ್ಲಿ 178 ರನ್ ಗಳಿಸಿದ ಕೊಹ್ಲಿ ಹರಿಣ ಪಡೆ ದಾಳಿಯನ್ನು ಧ್ವಂಸಗೊಳಿಸಿದರು. ರಹಾನೆ ಔಟಾದ ಬಳಿಕ ಜಡೇಜ ಅವರೊಂದಿಗೆ 6ನೇ ವಿಕೆಟ್ಗೆ 225 ರನ್ ಜೊತೆಯಾಟ ನಡೆಸಿದ ಕೊಹ್ಲಿ ಭಾರತ ರನ್ಗಳ ರಾಶಿ ಕೂಡಿ ಹಾಕಲು ನೆರವಾದರು. ದಕ್ಷಿಣ ಆಫ್ರಿಕಾ ಬೌಲಿಂಗ್ ವಿಭಾಗದಲ್ಲಿ ಕಾಗಿಸೊ ರಬಾಡ(3-93)ಯಶಸ್ವಿ ಬೌಲರ್ ಎನಿಸಿಕೊಂಡರೆ, 26 ಓವರ್ ಬೌಲಿಂಗ್ ಮಾಡಿದ್ದ ಫಿಲ್ಯಾಂಡರ್ ವಿಕೆಟ್ ಪಡೆಯದಿದ್ದರೂ ಮಿತವ್ಯಯಿ ಎನಿಸಿಕೊಂಡರು. ಸ್ಪಿನ್ನರ್ ಕೇಶವ್ ಮಹಾರಾಜ್ 50 ಓವರ್ಗಳ ಬೌಲಿಂಗ್ ಮಾಡಿ 196 ರನ್ ನೀಡಿದ್ದಲ್ಲದೆ ಕೇವಲ 1 ವಿಕೆಟ್ ಪಡೆದು ಸಮಾಧಾನ ಪಟ್ಟರು.
ಭಾರತದ ಬೃಹತ್ ಮೊತ್ತ ನೋಡಿ ಮೂರ್ಛೆ ಹೋದವರಂತೆ ಕಂಡುಬಂದ ದಕ್ಷಿಣ ಆಫ್ರಿಕಾ 15 ಓವರ್ಗಳಲ್ಲಿ 36 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ಗಳನ್ನು ಕಳೆದು ಕೊಂಡು ಕಳಪೆ ಆರಂಭ ಪಡೆದಿದೆ.
ಕೊಹ್ಲಿ ನಿರ್ಮಿಸಿದ ದಾಖಲೆಗಳ ಪಟ್ಟಿ
ಪುಣೆ, ಅ.11: ದಕ್ಷಿಣ ಆಫ್ರಿಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಔಟಾಗದೆ ದ್ವಿಶತಕ ಸಿಡಿಸಿದ ಭಾರತದ ನಾಯಕ ವಿರಾಟ್ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದರು.
►1. ಕೊಹ್ಲಿ ನಾಯಕನಾಗಿ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ 40 ಶತಕಗಳನ್ನು ಸಿಡಿಸಿದ ಭಾರತದ ಏಕೈಕ ನಾಯಕ. ಆಸೀಸ್ನ ರಿಕಿ ಪಾಂಟಿಂಗ್(41 ಶತಕ)ಮೊದಲ ಸ್ಥಾನದಲ್ಲಿದ್ದಾರೆ.
►2. ಏಳನೇ ದ್ವಿಶತಕ ಸಿಡಿಸಿದ ಕೊಹ್ಲಿ, ಟೆಸ್ಟ್ನಲ್ಲಿ ಗರಿಷ್ಠ ದ್ವಿಶತಕ ಗಳಿಸಿದ ಭಾರತದ ಬ್ಯಾಟ್ಸ್ ಮನ್ಎನಿಸಿಕೊಂಡರು. ಸಚಿನ್ ತೆಂಡುಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್(ತಲಾ 6 ದ್ವಿಶತಕ) ದಾಖಲೆ ಮುರಿದರು. 3. ಟೆಸ್ಟ್ ನಾಯಕನಾಗಿ 9ನೇ ಬಾರಿ 150ಕ್ಕೂ ಅಧಿಕ ರನ್ ಗಳಿಸಿದ ಕೊಹ್ಲಿ ಆಸ್ಟ್ರೇಲಿಯ ದಂತಕತೆ ಡಾನ್ ಬ್ರಾಡ್ಮನ್ ದಾಖಲೆ(8) ಮುರಿದರು.
►4. ನಾಯಕನಾಗಿ 19ನೇ ಟೆಸ್ಟ್ ಶತಕ ಸಿಡಿಸಿದ ಕೊಹ್ಲಿ ಆಸ್ಟ್ರೇಲಿಯದ ದಂತಕತೆ ಪಾಂಟಿಂಗ್(19)ದಾಖಲೆ ಸರಿಗಟ್ಟಿದರು. ಕೊಹ್ಲಿ ಹಾಗೂ ಪಾಂಟಿಂಗ್ ದ.ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್(25)ಬಳಿಕ 2ನೇ ಸ್ಥಾನದಲ್ಲಿದ್ದಾರೆ.
►5. ಕೊಹ್ಲಿ ಜೀವನಶ್ರೇಷ್ಠ ಪ್ರದರ್ಶನ(ಔಟಾಗದೆ 254)ನೀಡಿದರು. ಈ ಮೂಲಕ ನಾಯಕನಾಗಿ ಗಳಿಸಿದ್ದ ತನ್ನದೇ ಹಿಂದಿನ ವೈಯಕ್ತಿಕ ಶ್ರೇಷ್ಠ ಸ್ಕೋರ್(243)ದಾಖಲೆಯನ್ನು ಮುರಿದರು.
►6. 26ನೇ ಟೆಸ್ಟ್ ಶತಕ ಗಳಿಸಿದ ಕೊಹ್ಲಿ ಪಾಕಿಸ್ತಾನದ ಇಂಝಮಮುಲ್ಹಕ್(25)ದಾಖಲೆ ಮುರಿದರು. ವೆಸ್ಟ್ಇಂಡೀಸ್ನ ಗ್ಯಾರಿ ಸೋಬರ್ಸ್(26 ಶತಕ), ಆಸೀಸ್ನ ಸ್ಟೀವ್ ಸ್ಮಿತ್(26)ರೊಂದಿಗೆ ಗರಿಷ್ಠ ಟೆಸ್ಟ್ಟ್ ಶತಕ ಗಳಿಸಿದವರ ಪಟ್ಟಿಯಲ್ಲಿ 13ನೇ ಸ್ಥಾನ ಹಂಚಿಕೊಂಡರು.
►7.ಟೆಸ್ಟ್ನಲ್ಲಿ 7 ಸಾವಿರಕ್ಕೂ ಅಧಿಕ ರನ್ ಗಳಿಸಿದ(7,054) ಕೊಹ್ಲಿ ಮಾಜಿ ಬ್ಯಾಟ್ಸ್ಮನ್ ದಿಲೀಪ್ ವೆಂಗ್ಸರ್ಕಾರ್(6,868 ರನ್)ದಾಖಲೆ ಮುರಿದರು. ಟೆಸ್ಟ್ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಭಾರತದ ಆಟಗಾರರ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿದರು.