ಆರನೇ ಬಾರಿ ಬ್ಯಾಲನ್ ಡಿಒರ್ ಪ್ರಶಸ್ತಿ ಜಯಿಸಿದ ಲಿಯೊನೆಲ್ ಮೆಸ್ಸಿ
ಪ್ಯಾರಿಸ್, ಡಿ.3: ಲಿವರ್ಪೂಲ್ನ ನಾಲ್ಕು ಪ್ರಮುಖ ಸ್ಪರ್ಧಿಗಳನ್ನು ಹಿಂದಿಕ್ಕಿದ ಲಿಯೊನೆಲ್ ಮೆಸ್ಸಿ ಫುಟ್ಬಾಲ್ನ ಪ್ರತಿಷ್ಠಿತ ವೈಯಕ್ತಿಕ ಟ್ರೋಫಿ ಬ್ಯಾಲನ್ ಡಿಒರ್ ಪ್ರಶಸ್ತಿಯನ್ನು ಆರನೇ ಬಾರಿ ಬಗಲಿಗೇರಿಸಿಕೊಂಡಿದ್ದಾರೆ.
ಬಾರ್ಸಿಲೋನ ಎಫ್ಸಿ ಪರ ಲಾಲಿಗ ಪ್ರಶಸ್ತಿಯನ್ನು ಜಯಿಸಿದ್ದ ಅರ್ಜೆಂಟೀನದ ಮೆಸ್ಸಿ ತನ್ನ ದೇಶದ ಪರ ಕೊಪಾ ಅಮೆರಿಕ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಈ ಹಿಂದೆ 2009, 2010, 2011, 2012 ಹಾಗೂ 2015ರಲ್ಲಿ ಮೆಸ್ಸಿ ಬ್ಯಾಲನ್ ಡಿ ಒರ್ ಪ್ರಶಸ್ತಿಯನ್ನು ಜಯಿಸಿದ್ದರು.
ಮೆಸ್ಸಿ ಆರನೇ ಬಾರಿ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ಪ್ರತಿಸ್ಪರ್ಧಿ ವಿರ್ಜಿಲ್ ವ್ಯಾನ್ಜಿಕ್ ಹಾಗೂ ಐದು ಬಾರಿ ಪ್ರಶಸ್ತಿ ಜಯಿಸಿದ್ದ ಪೋರ್ಚುಗಲ್ನ ಕ್ರಿಸ್ಟಿಯಾನೊ ರೊನಾಲ್ಡೊರನ್ನು ಹಿಂದಿಕ್ಕಿದ್ದಾರೆ.
"10 ವರ್ಷಗಳ ಹಿಂದೆ ಮೂವರು ಸಹೋದರರ ಮಾರ್ಗದರ್ಶನದ ಫಲವಾಗಿ ನಾನು ಮೊದಲ ಬಾರಿ ಬ್ಯಾಲನ್ಡಿಒರ್ ಪ್ರಶಸ್ತಿ ಸ್ವೀಕರಿಸಿದ್ದೆ. ಇಂದು ಪತ್ನಿ ಹಾಗೂ ಮಕ್ಕಳ ಬೆಂಬಲದಿಂದಾಗಿ ಆರನೇ ಬಾರಿ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ'' ಎಂದು ಮೆಸ್ಸಿ ಪ್ರತಿಕ್ರಿಯೆ ನೀಡಿದ್ದಾರೆ.