ಮಣಿಪುರದ ರೆಕ್ಸ್ ಸಿಂಗ್ಗೆ 8 ವಿಕೆಟ್ಗಳು ಐವರು ಆಟಗಾರರಿಂದ ಶೂನ್ಯ ಸಂಪಾದನೆ
ಕೋಲ್ಕತಾ, ಡಿ.9: ಮಣಿಪುರದ ಯುವ ಎಡಗೈ ವೇಗದ ಬೌಲರ್ ರೆಕ್ಸ್ ಸಿಂಗ್ಗೆ ಡಿಸೆಂಬರ್ ತಿಂಗಳು ಅದೃಷ್ಟದ ತಿಂಗಳಾಗಿರುವಂತೆ ಕಂಡುಬಂದಿದೆ. ಕಳೆದ ವರ್ಷದ ಡಿಸೆಂಬರ್ನಲ್ಲಿ ಕೂಚ್ ಬಿಹಾರ್ ಟ್ರೋಫಿ ಪಂದ್ಯದಲ್ಲಿ 10 ವಿಕೆಟ್ ಗೊಂಚಲು ಪಡೆದು ಮಿಂಚಿದ್ದ ರೆಕ್ಸ್ ಈ ವರ್ಷದ ಡಿಸೆಂಬರ್ನಲ್ಲಿ ರಣಜಿ ಟ್ರೋಫಿಯಲ್ಲಿ ಮಿಂಚು ಹರಿಸಿದ್ದಾರೆ.
ಮಿಝೊರಾಂ ವಿರುದ್ಧ ಸೋಮವಾರ ಸಾಲ್ಟ್ಲೇಕ್ನ ಜಾದವ್ಪುರ ಯುನಿವರ್ಸಿಟಿ ಮೈದಾನದಲ್ಲಿ ಆರಂಭವಾದ ರಣಜಿ ಟ್ರೋಫಿಯ ಮೊದಲ ದಿನದ ಪಂದ್ಯದಲ್ಲಿ 19ರ ಹರೆಯದ ರೆಕ್ಸ್ ಸಿಂಗ್ ಕೇವಲ 22 ರನ್ ನೀಡಿ 8 ವಿಕೆಟ್ಗಳನ್ನು ಉರುಳಿಸಿದರು. ಈ ಪೈಕಿ ಐವರು ಬ್ಯಾಟ್ಸ್ ಮನ್ಗಳು ರನ್ ಖಾತೆ ತೆರೆಯುವಲ್ಲಿಯೂ ವಿಫಲರಾದರು. ರೆಕ್ಸ್ ಸಿಂಗ್ ದಾಳಿಗೆ ಸಿಲುಕಿದ ಮಿರೆರಾಂ ತಂಡ ಕೇವಲ 51 ರನ್ಗೆ ಆಲೌಟಾಯಿತು.
ರೆಕ್ಸ್ 8 ಓವರ್ಗಳ ಬೌಲಿಂಗ್ನಲ್ಲಿ 4 ಮೇಡನ್ ಸಹಿತ 22 ರನ್ಗೆ 8 ವಿಕೆಟ್ ಪಡೆದಿದ್ದಾರೆ. ಕಳೆದ ವರ್ಷ ಕೂಚ್ ಬಿಹಾರ್ ಟ್ರೋಫಿ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ರೆಕ್ಸ್ ಈ ವರ್ಷಾರಂಭದಲ್ಲಿ ದಕ್ಷಿಣ ಆಫ್ರಿಕಾ ಅಂಡರ್-19 ತಂಡದ ವಿರುದ್ಧ ಪಂದ್ಯದಲ್ಲಿ ಭಾರತದ ಅಂಡರ್-19 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು.