ಪಾಕ್ಗೆ ಟೆಸ್ಟ್ ಕ್ರಿಕೆಟ್ ಮರಳಿರುವುದು ಭಾವನಾತ್ಮಕ ಕ್ಷಣ: ಅಝರ್ ಅಲಿ
ರಾವಲ್ಪಿಂಡಿ, ಡಿ.10: ಪಾಕಿಸ್ತಾನದ ನೆಲಕ್ಕೆ ಟೆಸ್ಟ್ ಕ್ರಿಕೆಟ್ ವಾಪಸಾಗಿರುವುದು ಒಂದು ಭಾವನಾತ್ಮಕ ಕ್ಷಣವಾಗಿದೆ ಎಂದು ಪಾಕ್ ನಾಯಕ ಅಝರ್ ಅಲಿ ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನದ ಆಟಗಾರರು ಸುಮಾರು 10 ವರ್ಷಗಳ ಅಂತರದ ಬಳಿಕ ತವರು ನೆಲದಲ್ಲಿ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದು, ಬುಧವಾರ ಇಲ್ಲಿ ಆರಂಭವಾಗಲಿರುವ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ.
2009ರಲ್ಲಿ ಲಾಹೋರ್ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರರು ಟೀಮ್ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಉಗ್ರರು ದಾಳಿ ನಡೆಸಿದ್ದರು. ಆ ಬಳಿಕ ಪಾಕಿಸ್ತಾನ ತಂಡ ತನ್ನ ತವರು ಪಂದ್ಯಗಳನ್ನು ತಟಸ್ಥ ತಾಣಗಳಲ್ಲಿ ಆಡುತ್ತಾ ಬಂದಿದೆ.
‘‘ಎಲ್ಲ ಆಟಗಾರರು ಈ ಟೆಸ್ಟ್ ಸರಣಿಯ ಬಗ್ಗೆ ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ನಮ್ಮ ತವರು ಮೈದಾನಕ್ಕೆ ವಾಪಸಾಗಿರುವುದಕ್ಕೆ ನಮಗೆ ತುಂಬಾ ಖುಷಿಯಾಗುತ್ತಿದೆ. ಇನ್ನು ಮುಂದೆ ಪಾಕಿಸ್ತಾನಕ್ಕೆ ನಿರಂತರವಾಗಿ ಟೆಸ್ಟ್ ಕ್ರಿಕೆಟ್ ನಡೆಯುತ್ತಿರಲಿ. ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯ ವಿರುದ್ಧ ಕಳೆದ 2 ಸರಣಿಯಲ್ಲಿನ ಸೋಲು ನೋವುಂಟು ಮಾಡಿದೆ. ಈ ಸರಣಿ ಎಷ್ಟೊಂದು ಮುಖ್ಯ ಎಂದು ನಮಗೆ ಗೊತ್ತಿದೆ’’ ಎಂದು ಸುದ್ದಿಗೋಷ್ಠಿಯಲ್ಲಿ ಅಝರ್ಅಲಿ ಹೇಳಿದ್ದಾರೆ.