ವಿಶ್ವ ಟೆನಿಸ್ ಚಾಂಪಿಯನ್ಶಿಪ್ ಮುಕುಟ ಗೆದ್ದ ರಫೆಲ್ ನಡಾಲ್
ಅಬುಧಾಬಿ, ಡಿ.22: ವಿಶ್ವದ ನಂ.1 ಆಟಗಾರ ರಫೆಲ್ ನಡಾಲ್ ವಿಶ್ವ ಟೆನಿಸ್ ಚಾಂಪಿಯನ್ಶಿಪ್ ಮುಕುಟ ಗೆದ್ದುಕೊಂಡಿದ್ದಾರೆ. ಐದನೇ ಬಾರಿ ಈ ಪ್ರಶಸ್ತಿಯನ್ನು ಎತ್ತಿ ಹಿಡಿದ ಮೊದಲ ಆಟಗಾರ ಎನಿಸಿಕೊಳ್ಳುವುದರೊಂದಿಗೆ ದಾಖಲೆ ನಿರ್ಮಿಸಿದ್ದಾರೆ. ಇಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ನಡಾಲ್ ಸ್ಟೆಫನೊಸ್ ಸಿಟ್ಸಿಪಾಸ್ರನ್ನು 6-7(3-7), 7-5, 7-6(7-3)ಸೆಟ್ಗಳ ಅಂತರದಿಂದ ಮಣಿಸಿದರು. ಶುಕ್ರವಾರ ನಡೆದ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ರನ್ನು ಮಣಿಸಿದ ಎಟಿಪಿ ಫೈನಲ್ಸ್ ಚಾಂಪಿಯನ್ ಸಿಟ್ಸಿಪಾಸ್ ಇಲ್ಲಿ ನಡೆದ ಪ್ರದರ್ಶನ ಪಂದ್ಯದಲ್ಲಿ ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದರು. ಆದರೆ, ಸ್ಪೇನ್ನ ಸ್ಟಾರ್ ಆಟಗಾರ ನಡಾಲ್ ಮೂರು ಗಂಟೆಗೂ ಅಧಿಕ ಸಮಯ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿ ಐದನೇ ಬಾರಿ ಪ್ರಶಸ್ತಿ ಗೆದ್ದುಕೊಂಡರು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ವಿಶ್ವದ ನಂ.2ನೇ ಆಟಗಾರ ಜೊಕೊವಿಕ್ ರಶ್ಯದ ಕರೆನ್ ಖಚನೊವ್ರನ್ನು 7-5,6-3 ಸೆಟ್ಗಳಿಂದ ಮಣಿಸಿ ಮೂರನೇ ಸ್ಥಾನ ಪಡೆದಿದ್ದಾರೆ.
Next Story