ಐಸಿಸಿ ಟೆಸ್ಟ್ ರ್ಯಾಂಕಿಂಗ್: ನಂ.1 ಸ್ಥಾನ ಉಳಿಸಿಕೊಂಡ ವಿರಾಟ್ ಕೊಹ್ಲಿ ಅಜಿಂಕ್ಯ ರಹಾನೆ, ಪೂಜಾರಗೆ ಹಿನ್ನಡೆ
ದುಬೈ, ಜ.8: ಭಾರತದ ನಾಯಕ ವಿರಾಟ್ ಕೊಹ್ಲಿ ಬುಧವಾರ ಬಿಡುಗಡೆಯಾದ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನ ಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದರೆ, ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ಹಿಂಭಡ್ತಿ ಪಡೆದಿದ್ದಾರೆ.
ಒಟ್ಟು 928 ಅಂಕ ಗಳಿಸಿರುವ ಕೊಹ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯದ ಬ್ಯಾಟಿಂಗ್ ಮಾಂತ್ರಿಕ ಸ್ಟೀವನ್ ಸ್ಮಿತ್ಗಿಂತ (911)ಮುನ್ನಡೆಯಲ್ಲಿದ್ದಾರೆ ಎಂದು ಐಸಿಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಪೂಜಾರ 791 ಅಂಕದೊಂದಿಗೆ ಒಂದು ಸ್ಥಾನ ಕೆಳಜಾರಿ ಆರನೇ ಸ್ಥಾನದಲ್ಲಿದ್ದರೆ, ರಹಾನೆ(759 ಅಂಕ)ಒಂದು ಸ್ಥಾನ ಕಳೆದುಕೊಂಡು 9ನೇ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯದ ಮಾರ್ನಸ್ ಲ್ಯಾಬುಶೆನ್ ಜೀವನಶ್ರೇಷ್ಠ ಮೂರನೇ ಸ್ಥಾನಕ್ಕೇರಿದ್ದಾರೆ. 25ರ ಹರೆಯದ ಲ್ಯಾಬುಶೆನ್ ನ್ಯೂಝಿಲ್ಯಾಂಡ್ ವಿರುದ್ಧ ಕೊನೆಯ ಟೆಸ್ಟ್ನಲ್ಲಿ 215 ಹಾಗೂ 59 ರನ್ ಗಳಿಸಿದ ಬಳಿಕ ಒಂದು ಸ್ಥಾನ ಭಡ್ತಿ ಪಡೆದಿದ್ದಾರೆ.
ಲ್ಯಾಬುಶೆನ್ ನ್ಯೂಝಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಒಟ್ಟು 549 ರನ್ ಗಳಿಸಿದ್ದಾರೆ. ಸ್ವದೇಶದಲ್ಲಿ ನಡೆದ ಪಾಕಿಸ್ತಾನ ವಿರುದ್ಧ ಪಂದ್ಯ ಸಹಿತ ಕಳೆದ 5 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 896 ರನ್ ಗಳಿಸಿದ್ದಾರೆ. ಬೌಲಿಂಗ್ ರ್ಯಾಂಕಿಂಗ್ನಲ್ಲಿ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ 794 ಅಂಕದೊಂದಿಗೆ ಆರನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(772 ಅಂಕ)ಹಾಗೂ ವೇಗದ ಬೌಲರ್ ಮುಹಮ್ಮದ್ ಶಮಿ(771)ಕ್ರಮವಾಗಿ 9ನೇ ಹಾಗೂ 10ನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯದ ವೇಗದ ಬೌಲರ್ ಪ್ಯಾಟ್ ಕಮಿನ್ಸ್ 904 ಪಾಯಿಂಟ್ಸ್ ನೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ನೀಲ್ ವಾಗ್ನರ್(852) ಹಾಗೂ ವೆಸ್ಟ್ಇಂಡೀಸ್ನ ಜೇಸನ್ ಹೋಲ್ಡರ್(830)ಎರಡನೇ ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಜೀವನಶ್ರೇಷ್ಠ 5ನೇ ಸ್ಥಾನ ಪಡೆದರು. 2018ರ ಮಾರ್ಚ್ನಲ್ಲಿ ಕೊನೆಯ ಬಾರಿ ಈ ಸಾಧನೆ ಮಾಡಿದ್ದರು.
ಸ್ಟಾರ್ಕ್ ಕಿವೀಸ್ ವಿರುದ್ಧ ಸರಣಿಯಲ್ಲಿ ಸಿಡ್ನಿಯಲ್ಲಿ ನಡೆದ 3ನೇ ಪಂದ್ಯದಲ್ಲಿ ನಾಲ್ಕು ವಿಕೆಟ್ಗಳ ಸಹಿತ ಸರಣಿಯಲ್ಲಿ ಒಟ್ಟು 15 ವಿಕೆಟ್ಗಳನ್ನು ಪಡೆದಿದ್ದಾರೆ. ಸಿಡ್ನಿ ಟೆಸ್ಟ್ ನಲ್ಲಿ 10 ವಿಕೆಟ್ ಗೊಂಚಲು ಪಡೆದಿದ್ದ ಸ್ಪಿನ್ನರ್ ನಥಾನ್ ಲಿಯೊನ್ 5 ಸ್ಥಾನ ಭಡ್ತಿ ಪಡೆದು 14ನೇ ಸ್ಥಾನ ಹಂಚಿಕೊಂಡಿದ್ದಾರೆ.
ನ್ಯೂಝಿಲ್ಯಾಂಡ್ನ ಆಲ್ರೌಂಡರ್ ಕಾಲಿನ್ ಡಿ ಗ್ರಾಂಡ್ಹೋಮ್ ರ್ಯಾಂಕಿಂಗ್ನಲ್ಲಿ ಮುನ್ನಡೆ ಪಡೆದಿದ್ದು, ಬ್ಯಾಟ್ಸ್ಮನ್ ರ್ಯಾಂಕಿಂಗ್ನಲ್ಲಿ 47ನೇ ಸ್ಥಾನದಿಂದ 39ನೇ ಸ್ಥಾನ ಹಾಗೂ ಬೌಲರ್ಗಳ ರ್ಯಾಂಕಿಂಗ್ನಲ್ಲಿ 36ನೇ ಸ್ಥಾನದಿಂದ 34ನೇ ಸ್ಥಾನ ಪಡೆದಿದ್ದಾರೆ.
ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ವೃತ್ತಿಜೀವನದಲ್ಲಿ ಎರಡನೇ ಬಾರಿ ಅಗ್ರ-10ರ ಬ್ಯಾಟ್ಸ್ಮನ್ ಎನಿಸಿಕೊಂಡರು. ದಕ್ಷಿಣ ಆಫ್ರಿಕಾ ವಿರುದ್ಧ 47 ಹಾಗೂ 72 ರನ್ ಗಳಿಸಿದ ಬಳಿಕ ಈ ಸಾಧನೆ ಮಾಡಿದ್ದಾರೆ. ಸ್ಟೋಕ್ಸ್ 15ನೇ ಸ್ಥಾನದಿಂದ 10ನೇ ಸ್ಥಾನಕ್ಕೇರಿದರು. ಕಳೆದ ವರ್ಷ ನವೆಂಬರ್ನಲ್ಲಿ 9ನೇ ಸ್ಥಾನಕ್ಕೇರಿದ್ದರು.