ಕುಸ್ತಿಪಟು ಅಂಶು ಮಲಿಕ್ಗೆ ಬೆಳ್ಳಿ
ರೋಮ್ ರ್ಯಾಂಕಿಂಗ್ ಸಿರೀಸ್
ರೋಮ್, ಜ.17: ರೋಮ್ ರ್ಯಾಂಕಿಂಗ್ ಸಿರೀಸ್ ಕುಸ್ತಿ ಸ್ಪರ್ಧೆಯಲ್ಲಿ ಯುವ ಕುಸ್ತಿಪಟು ಅಂಶು ಮಲಿಕ್ 57 ಕೆಜಿ ವಿಭಾಗದ ಫೈನಲ್ನಲ್ಲಿ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಪ್ಲೇ-ಆಫ್ ಸುತ್ತಿನಲ್ಲಿ ಸೋಲನುಭವಿಸಿದ ದಿವ್ಯಾ ಕಕ್ರಾನ್ ಕಂಚಿನ ಪದಕದಿಂದ ವಂಚಿತರಾದರು.
ಮೊದಲ ಬಾರಿ ಆಡಿದ್ದ ಹಿರಿಯರ ಅಂತರ್ರಾಷ್ಟ್ರೀಯ ಟೂರ್ನಮೆಂಟ್ನ ಟ್ರಯಲ್ಸ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಅಂಶು ಚಿನ್ನದ ಪದಕದ ಸ್ಪರ್ಧೆಯಲ್ಲಿ ಇದೇ ಪ್ರದರ್ಶನ ಪುನರಾವರ್ತಿಸಲು ವಿಫಲರಾಗಿ ನೈಜೀರಿಯದ ಒಡುನಯೊ ಅಡೆಕುರೊಯೆಗೆ ಶರಣಾದರು.
18ರ ಹರೆಯದ ಅಂಶು ಫೈನಲ್ ಹಾದಿಯಲ್ಲಿ ಪ್ರಾಬಲ್ಯ ಮೆರೆದಿದ್ದು ಅಮೆರಿಕದ ಜೆನ್ನಾ ರೋಶ್ ಬರ್ಕೆಟ್, ನಾರ್ವೆಯ ಗ್ರೇಸ್ ಬುಲ್ಲೆನ್, 2019ರ ವಿಶ್ವ ಚಾಂಪಿಯನ್ ಕೆನಡಾದ ಲಿಂಡಾ ಮೊರಾಯಿಸ್ರನ್ನು ಮಣಿಸಿದ್ದರು.
ಅಂಶು ಟ್ರಯಲ್ಸ್ನಲ್ಲಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ವಿಜೇತೆ ಪೂಜಾ ಧಾಂಡಾರನ್ನು ಸೋಲಿಸಿದ್ದರು. ಕೆನಡಾದ ಡ್ಯಾನೀಲ್ ಸೂಝಾನೆಗೆ ಸೋತಿರುವ ದಿವ್ಯಾ ಬರಿಗೈಯಲ್ಲಿ ವಾಪಸಾಗಿದ್ದಾರೆ. ಭಾರತ ಇನ್ನೊಂದು ಪದಕದ ನಿರೀಕ್ಷೆಯಲ್ಲಿದ್ದು, 2019ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ವಿಜೇತೆ ವಿನೇಶ್ ಫೋಗಟ್ 53 ಕೆಜಿ ವಿಭಾಗದಲ್ಲಿ ಇನ್ನಷ್ಟೇ ಸ್ಪರ್ಧಿಸಬೇಕಾಗಿದೆ.