ಭಾರತದ ಮಾಜಿ ಆಲ್ರೌಂಡರ್ ಬಾಪು ನಾಡಕರ್ಣಿ ನಿಧನ
ಮುಂಬೈ, ಜ.18: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವೊಂದರಲ್ಲಿ ಸತತ 12 ಮೇಡನ್ ಓವರ್ ಎಸೆದು ಖ್ಯಾತಿ ಪಡೆದಿದ್ದ ಭಾರತದ ಮಾಜಿ ಆಲ್ರೌಂಡರ್ ಬಾಪು ನಾಡಕರ್ಣಿ ಶುಕ್ರವಾರ ವಯೋಸಂಬಂಧಿ ಸಮಸ್ಯೆಯಿಂದ ಮೃತಪಟ್ಟಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.
86 ವಯಸ್ಸಿನ ನಾಡಕರ್ಣಿ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಎಡಗೈ ಸ್ಪಿನ್ ಬೌಲರ್ ಜೊತೆಗೆ ಬ್ಯಾಟ್ಸ್ಮನ್ ಕೂಡ ಆಗಿದ್ದ ನಾಡಕರ್ಣಿ 1955ರಿಂದ 68ರ ನಡುವೆ ಭಾರತ ತಂಡಕ್ಕೆ ಅನೇಕ ಕೊಡುಗೆ ನೀಡಿದ್ದರು. 41 ಟೆಸ್ಟ್ ಪಂದ್ಯಗಳಲ್ಲಿ 1,414 ರನ್ ಹಾಗೂ 88 ವಿಕೆಟ್ಗಳನ್ನು ಪಡೆದಿದ್ದರು. 43 ರನ್ಗೆ 6 ವಿಕೆಟ್ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ.
ಮುಂಬೈ ದೇಶೀಯ ಕ್ರಿಕೆಟ್ನ ದಿಗ್ಗಜನಾಗಿದ್ದ ನಾಡಕರ್ಣಿ 191 ಪ್ರಥಮದರ್ಜೆ ಪಂದ್ಯಗಳಲ್ಲಿ 8,880 ರನ್ ಹಾಗೂ 500 ವಿಕೆಟ್ಗಳನ್ನು ಕಬಳಿಸಿದ್ದರು. ನಾಸಿಕ್ ಮೂಲದ ನಾಡಕರ್ಣಿ 1955ರಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಕಾಲಿಟ್ಟರು. 1968ರಲ್ಲಿ ಕಿವೀಸ್ ವಿರುದ್ಧವೇ ಆಕ್ಲೆಂಡ್ನಲ್ಲಿ ಕೊನೆಯ ಪಂದ್ಯ ಆಡಿದ್ದರು. ಮದ್ರಾಸ್ ಟೆಸ್ಟ್ನಲ್ಲಿ ಸತತ 21 ಮೇಡನ್ ಓವರ್ ಎಸೆದು ಖ್ಯಾತಿ ಪಡೆದಿದ್ದರು. 32 ಓವರ್ಗಳ ಬೌಲಿಂಗ್ನಲ್ಲಿ ವಿಕೆಟ್ ಪಡೆಯದಿದ್ದರೂ 27 ಮೇಡನ್ ಓವರ್ ಎಸೆದು ಕೇವಲ 5 ರನ್ ನೀಡಿದ್ದರು.