ಕೊಕೊ ಗೌಫ್ ಗೆಲುವಿನ ಓಟಕ್ಕೆ ಕೆನಿನ್ ಕಡಿವಾಣ
ಮೆಲ್ಬೋರ್ನ್, ಜ.26: ಆಸ್ಟ್ರೇಲಿಯನ್ ಓಪನ್ನಲ್ಲಿ ಇತಿಹಾಸ ನಿರ್ಮಿಸಬೇಕೆಂಬ ಕೊಕೊ ಗೌಫ್ ಕನಸು ಕಣ್ಣೀರಿನೊಂದಿಗೆ ಕೊನೆಯಾಗಿದೆ. ರವಿವಾರ ನಡೆದ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ 15ರ ಬಾಲಕಿ ಗೌಫ್ ಅಮೆರಿಕದ ಸೋಫಿಯಾ ಕೆನಿನ್ ವಿರುದ್ಧ ನೇರ ಸೆಟ್ಗಳ ಅಂತರದಿಂದ ಸೋಲನುಭವಿಸಿ ಟೂರ್ನಿಯಿಂದ ನಿರ್ಗಮಿಸಿದರು.
14ನೇ ಶ್ರೇಯಾಂಕದ ಕೆನಿನ್ ಆರಂಭಿಕ ಸೆಟ್ ಸೋಲಿನಿಂದ ಚೇತರಿಸಿಕೊಂಡು 6-7(5/7), 6-3, 6-0 ಸೆಟ್ಗಳ ಅಂತರದಿಂದ ಗೆಲುವು ಸಾಧಿಸಿದರು. ಕೆನಿನ್ ಕ್ವಾರ್ಟರ್ ಫೈನಲ್ನಲ್ಲಿ ಚೀನಾದ ವಾಂಗ್ ಕಿಯಾಂಗ್ ಅಥವಾ ಟ್ಯುನಿಶಿಯದ ಒನ್ಸ್ ಜಾಬೆವುರ್ರನ್ನು ಎದುರಿಸಲಿದ್ದಾರೆ.
ಗೌಫ್ ಆಸ್ಟ್ರೇಲಿಯನ್ ಓಪನ್ನಲ್ಲಿ ಸ್ಪರ್ಧಿಸುತ್ತಿರುವ ಯುವ ಆಟಗಾರ್ತಿಯಾಗಿದ್ದರು. ಇದೀಗ ಅವರು ಕಣ್ಣೀರಿನೊಂದಿಗೆ ಟೂರ್ನಿಯಿಂದ ನಿರ್ಗಮಿಸಿದರು.ಗೌಫ್ ಟೂರ್ನಿಯ ಮೊದಲ ಸುತ್ತಿನಲ್ಲಿ ಅಮೆರಿಕದ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ರನ್ನು ಮಣಿಸಿ ಗಮನ ಸೆಳೆದರು. ಮೂರನೇ ಸುತ್ತಿನಲ್ಲಿ ಹಾಲಿ ಚಾಂಪಿಯನ್, ಜಪಾನ್ನ ನವೊಮಿ ಒಸಾಕಾರನ್ನು ಸೋಲಿಸಿ ಶಾಕ್ ನೀಡಿದರು.
ಮಾರ್ಚ್ನಲ್ಲಿ 16ನೇ ವಯಸ್ಸಿಗೆ ಕಾಲಿಡಲಿರುವ ಪ್ರತಿಭಾವಂತ ಕಿರಿಯ ವಯಸ್ಸಿನ ಆಟಗಾರ್ತಿ ಗೌಫ್ ಮುಕ್ತ ಟೆನಿಸ್ ಯುಗದಲ್ಲಿ ಗ್ರಾನ್ಸ್ಲಾಮ್ ಪ್ರಶಸ್ತಿ ಜಯಿಸಿದ ಕಿರಿಯ ಆಟಗಾರ್ತಿಯಾಗಬೇಕೆಂಬ ಪ್ರಯತ್ನದಲ್ಲಿದ್ದರು. 1968ರಲ್ಲಿ ಓಪನ್ ಯುಗ ಆರಂಭವಾಗಿದ ನಂತರ ಮಾರ್ಟಿನಾ ಹಿಂಗಿಸ್ 1997ರಲ್ಲಿ 16 ವರ್ಷ, 105ನೇ ದಿನದಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಜಯಿಸಿದ ಮೊದಲ ಕಿರಿಯ ವಯಸ್ಸಿನ ಆಟಗಾರ್ತಿ ಎಂಬ ಅಪೂರ್ವ ದಾಖಲೆ ನಿರ್ಮಿಸಿದ್ದರು.