ನಡಾಲ್ಗೆ ಶಾಕ್ ನೀಡಿದ ಡೊಮಿನಿಕ್ ಥೀಮ್
ಮೆಲ್ಬೋರ್ನ್, ಜ.29: ಆಸ್ಟ್ರೀಯದ ಡೊಮಿನಿಕ್ ಥೀಮ್ ವಿಶ್ವದ ನಂ.1 ಆಟಗಾರ ರಫೆಲ್ ನಡಾಲ್ರನ್ನು ಮಣಿಸಿ ಶಾಕ್ ನೀಡಿದ್ದಾರೆ. ಆಸ್ಟ್ರೇಲಿಯನ್ ಓಪನ್ನಲ್ಲಿ ಸೆಮಿ ಫೈನಲ್ ತಲುಪಿರುವ ಥೀಮ್ ಮುಂದಿನ ಸುತ್ತಿನಲ್ಲಿ ಅಲೆಕ್ಸಾಂಡರ್ ಝ್ವೆರೆವ್ರನ್ನು ಎದುರಿಸಲಿದ್ದಾರೆ. ಇಲ್ಲಿ ಬುಧವಾರ ನಡೆದ ಪುರುಷರ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ ಫೈಟ್ನಲ್ಲಿ ಐದನೇ ಶ್ರೇಯಾಂಕದ ಥೀಮ್ ಸ್ಪೇನ್ ಸೂಪರ್ಸ್ಟಾರ್ ನಡಾಲ್ರನ್ನು 7-6(7/3), 7-6(7/4), 4-6, 7-6(8/6)ಸೆಟ್ಗಳಿಂದ ಮಣಿಸಿದರು. ಈ ಮೂಲಕ 20ನೇ ಗ್ರಾನ್ಸ್ಲಾಮ್ ಜಯಿಸಿ ದಾಖಲೆ ಸಮಬಲಗೊಳಿಸುವ ನಡಾಲ್ ಕನಸಿಗೆ ತಣ್ಣೀರೆರಚಿದರು. ಥೀಮ್ ಮುಂದಿನ ಸುತ್ತಿನಲ್ಲಿ ಜರ್ಮನಿಯ ಏಳನೇ ಶ್ರೇಯಾಂಕದ ಝ್ವೆರೆವ್ರನ್ನು ಎದುರಿಸಲಿದ್ದಾರೆ. ಝ್ವೆರೆವ್ ಹಿರಿಯ ಆಟಗಾರ ಸ್ಟಾನ್ ವಾವ್ರಿಂಕರನ್ನು ಮಣಿಸಿ ಮೊದಲ ಬಾರಿ ಗ್ರಾನ್ಸ್ಲಾಮ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದಾರೆ. ಅಗ್ರ ಶ್ರೇಯಾಂಕದ ನಡಾಲ್ ಅವರು ಥೀಮ್ ವಿರುದ್ಧ 9-4 ಹೆಡ್-ಟು-ಹೆಡ್ ದಾಖಲೆ ಹೊಂದಿದ್ದಾರೆ. ಈ ಹಿಂದಿನ ಎಲ್ಲ ಐದು ಗ್ರಾನ್ಸ್ಲಾಮ್ ಪಂದ್ಯಗಳಲ್ಲಿ ಜಯಶಾಲಿಯಾಗಿದ್ದಾರೆ.
2018ರ ಅಮೆರಿಕ ಓಪನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈ ಇಬ್ಬರು ಆಟಗಾರರು ಮುಖಾಮುಖಿಯಾಗಿದ್ದರು. ಆ ಪಂದ್ಯ ಐದು ಸೆಟ್ಗಳ ಮ್ಯಾರಥಾನ್ ಪಂದ್ಯವಾಗಿ ಗಮನ ಸೆಳೆದಿತ್ತು.