ಜೊಕೊವಿಕ್ ಪುರುಷರ ಸಿಂಗಲ್ಸ್ ಚಾಂಪಿಯನ್
ಆಸ್ಟ್ರೇಲಿಯನ್ ಓಪನ್
ಮೆಲ್ಬೋರ್ನ್, ಫೆ.2: ಡೊಮಿನಿಕ್ ಥೀಮ್ ಸವಾಲನ್ನು ಹಿಮ್ಮೆಟ್ಟಿದ ಸರ್ಬಿಯದ ಟೆನಿಸ್ ಸೂಪರ್ಸ್ಟಾರ್ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ನ ಪುರುಷರ ಸಿಂಗಲ್ಸ್ ನಲ್ಲಿ ಚಾಂಪಿಯನ್ ಕಿರೀಟ ಧರಿಸಿದ್ದಾರೆ.
ರವಿವಾರ ಸುಮಾರು 4 ಗಂಟೆಗಳ ಕಾಲ ನಡೆದ ಮ್ಯಾರಥಾನ್ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಜೊಕೊವಿಕ್ ಆಸ್ಟ್ರೀಯದ ಥೀಮ್ ಅವರನ್ನು 6-4, 4-6, 2-6, 6-3, 6-4 ಸೆಟ್ಗಳ ಅಂತರದಿಂದ ಮಣಿಸಿದರು.ಈಮೂಲಕ 8ನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಮಾತ್ರವಲ್ಲ ಎಟಿಪಿ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನವನ್ನು ವಶಪಡಿಸಿಕೊಂಡರು.
ರಫೆಲ್ ನಡಾಲ್ ಫ್ರೆಂಚ್ ಓಪನ್ನಲ್ಲಿ 12 ಪ್ರಶಸ್ತಿಯನ್ನು ಜಯಿಸಿ ತನ್ನ ಪ್ರಾಬಲ್ಯ ಮೆರೆದಿದ್ದಾರೆ. ಅದೇ ರೀತಿ ಜೊಕೊವಿಕ್ ಮೆಲ್ಬೋರ್ನ್ನಲ್ಲಿ ಈ ತನಕ ಫೈನಲ್ ಪಂದ್ಯವನ್ನು ಸೋತಿಲ್ಲ. ಮೆಲ್ಬೋರ್ನ್ನಲ್ಲಿ 8ನೇ ಬಾರಿ ಫೈನಲ್ ಪಂದ್ಯ ಆಡಿದ ಜೊಕೊವಿಕ್ ಇದೇ ಮೊದಲ ಬಾರಿ ಹಿನ್ನಡೆಯಿಂದ ಚೇತರಿಸಿಕೊಂಡು ತಿರುಗೇಟು ನೀಡಿದರು. ಥೀಮ್ ಅವರ ಶಕ್ತಿ ಹಾಗೂ ಬದ್ಧತೆಗೆ ಜೊಕೊವಿಕ್ ಒಂದು ಕ್ಷಣ ಸ್ತಬ್ದರಾದರು. ಆದಾಗ್ಯೂ ತನ್ನೆಲ್ಲಾ ಅನುಭವ ಬಳಸಿಕೊಂಡು 17ನೇ ಗ್ರಾನ್ಸ್ಲಾಮ್ ಪ್ರಶಸ್ತಿಯನ್ನು ಎತ್ತಿ ಹಿಡಿದರು.