ಕ್ರೀಡಾ ಜಗತ್ತಿಗೆ ಕೊರೋನ ಹೊಡೆತ
ಹೊಸದಿಲ್ಲಿ, ಫೆ.18: ಮಹಾಮಾರಿ ಕೊರೋನ ವೈರಸ್ ಸೋಂಕು ಚೀನಾದಲ್ಲಿ 1,800 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ವುಹಾನ್ ಹುಬೈ ಪಾಂತ್ಯದಲ್ಲಿ 70,000ಕ್ಕಿಂತ ಹೆಚ್ಚು ಜನರಿಗೆ ಸೋಂಕು ಬಾಧಿಸಿದೆ. ಕೊರೋನ ವೈರಸ್ ಸೋಂಕಿನ ಪರಿಣಾಮ ಕ್ರೀಡಾ ಜಗತ್ತಿಗೂ ತಟ್ಟಿದೆ. ಚೀನಾದಲ್ಲಿ ಈ ಮೊದಲು ನಿಗದಿಯಾಗಿದ್ದ ಹಲವು ಕ್ರೀಡಾಕೂಟಗಳ ಪೈಕಿ ಕೆಲವು ರದ್ದಾಗಿವೆೆ. ಇನ್ನು ಕೆಲವು ಮುಂದೂಡಲ್ಪಟ್ಟಿವೆ.
►ಅಥ್ಲೆಟಿಕ್ಸ್: ವಿಶ್ವ ಅಥ್ಲೆಟಿಕ್ಸ್ ಒಳಾಂಗಣ ಚಾಂಪಿಯನ್ಶಿಪ್ ನಾನ್ಜಿಂಗ್ನಲ್ಲಿ ಮಾರ್ಚ್ 13ರಿಂದ 15 ರ ತನಕ ನಿಗದಿಯಾಗಿತ್ತು. ಇದು ಇದೀಗ ಮುಂದಿನ ವರ್ಷದವರೆಗೆ ಮುಂದೂಡಲಾಗಿದೆ. ವಿಶ್ವ ಅಥ್ಲೆಟಿಕ್ಸ್ 2021ರಲ್ಲಿ ನಡೆಯಲಿದೆ.
ಹ್ಯಾಂಗ್ರೊನಲ್ಲಿ ಫೆ.12ರಿಂದ13ರ ತನಕ ನಿಗದಿಯಾಗಿದ್ದ ಒಳಾಂಗಣ ಚಾಂಪಿಯನ್ಶಿಪ್ನ್ನು ಏಶ್ಯನ್ ಅಥ್ಲೆಟಿಕ್ಸ್ ಅಸೋಸಿಯೇಶನ್ ರದ್ದುಗೊಳಿಸಿತ್ತು.
►ಫುಟ್ಬಾಲ್: ಚೀನಾದ ಕ್ಲಬ್ಗಳಾದ ಗುವಾಂಗ್ಝೌ ಎವರ್ಗ್ರಾಂಡೆ, ಶಾಂಘೈ ಶೆನ್ಹುವಾ ಮತ್ತು ಶಾಂಘೈ ಎಸ್ಐಪಿಜಿ ತಂಡಗಳನ್ನು ಒಳಗೊಂಡ ಏಶ್ಯನ್ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಪಂದ್ಯಗಳನ್ನು ಮುಂದೂಡಲಾಗಿದೆ.
ಚೀನಾದಿಂದ ಆಗಮಿಸುವ ವಿದೇಶಿ ಪ್ರಜೆಗಳಿಗೆ ಅಲ್ಲಿನ ಸರಕಾರ ನಿಷೇಧ ಹೇರಿದ ನಂತರ ಪಂದ್ಯಗಳನ್ನು ಮುಂದೂಡಲಾಗಿದೆ.
ಚೀನಾ, ಆಸ್ಟ್ರೇಲಿಯ, ತೈವಾನ್ ಮತ್ತು ಥಾಯ್ಲೆಂಡ್ ಒಳಗೊಂಡ ನಾಲ್ಕು ತಂಡಗಳ ಮಹಿಳಾ ಒಲಿಂಪಿಕ್ಸ್ ಅರ್ಹತಾ ಪಂದ್ಯಾವಳಿಯನ್ನು ಏಶ್ಯನ್ ಫುಟ್ಬಾಲ್ ಕಾನ್ಫೆಡರೇಷನ್ (ಎಎಫ್ಸಿ) ಸ್ಥಳಾಂತರಿಸಿದ್ದು, ಈ ಪಂದ್ಯಾವಳಿ ಆಸ್ಟ್ರೇಲಿಯದಲ್ಲಿ ನಡೆಯಲಿದೆ.
ಎಲ್ಲಾ ಹಂತದ ದೇಶೀಯ ಆಟಗಳನ್ನು ಮುಂದೂಡಲಾಗುವುದು ಎಂದು ಚೀನಾ ಫುಟ್ಬಾಲ್ ಸಂಸ್ಥೆ ಹೇಳಿದೆ. ಎಎಫ್ಸಿ ಕಪ್ 2020ರ ಪೂರ್ವ ವಲಯದ ಪ್ರಾಥಮಿಕ ಹಂತದ ಪಂದ್ಯಗಳನ್ನು ಎರಡು ತಿಂಗಳು ತನಕ ಮುಂದೂಡಲಾಗಿದೆ ಎಂದು ಎಎಫ್ಸಿ ಹೇಳಿದೆ.
►ಫಾರ್ಮುಲಾ ಒನ್: ಶಾಂಘೈನಲ್ಲಿನ ಚೈನೀಸ್ ಗ್ರ್ಯಾಂಡ್ ಪ್ರಿ ಸ್ಪರ್ಧೆಯನ್ನು ಎಪ್ರಿಲ್ 19 ಕ್ಕೆ ನಿಗದಿಪಡಿಸಲಾಗಿದೆ.
►ಫಾರ್ಮುಲಾ ಇ : ಮಾರ್ಚ್ 21 ರಂದು ಸನ್ಯಾದಲ್ಲಿ ನಡೆಯಬೇಕಿದ್ದ ಆಲ್-ಇಲೆಕ್ಟ್ರಿಕ್ ಫಾರ್ಮುಲಾ ಇ ಮೋಟಾರ್ ರೇಸಿಂಗ್ ಸಿರೀಸ್ನ್ನು ಕೈ ಬಿಡಲಾಗಿದೆ.
►ಟೆನಿಸ್: ಚೀನಾ, ತೈವಾನ್, ಇಂಡೋನೇಶ್ಯ ತಂಡಗಳನ್ನು ಒಳಗೊಂಡ ಫೆಡ್ ಕಪ್ ಏಶ್ಯ ಓಶಿಯಾನಿಯಾ ಗ್ರೂಪ್ ‘ಇ’ ಇವೆಂಟ್ನ್ನು ಅಂತರ್ರಾಷ್ಟ್ರೀಯ ಟೆನಿಸ್ ಫೆಡರೇಶನ್ ಸ್ಥಳಾಂತರಿಸುವ ನಿರ್ಧಾರ ಕೈಗೊಂಡಿದೆ.
►ಬ್ಯಾಡ್ಮಿಂಟನ್: ಫೆಬ್ರವರಿ 25 ರಿಂದ ಮಾರ್ಚ್ 1 ರವರೆಗೆ ಹೈನಾನ್ನಲ್ಲಿ ನಡೆಯಬೇಕಿದ್ದ ಚೀನಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಹಲವು ಆಟಗಾರರು ಭಾಗವಹಿಸಲು ಹಿಂದೇಟು ಹಾಕಿದ ನಂತರ ಮುಂದೂಡಲಾಗಿದೆ ಎಂದು ಬಿಡಬ್ಲುಎಫ್ ತಿಳಿಸಿದೆ.
►ಬಾಕ್ಸಿಂಗ್: ಅಂತರ್ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು ಜೋರ್ಡಾನ್ ಅನ್ನು ಏಷ್ಯಾ ಮತ್ತು ಓಶಿಯಾನಿಯಾದ ಬಾಕ್ಸಿಂಗ್ ಅರ್ಹತಾ ಪಂದ್ಯಗಳ ಆತಿಥೇಯ ಎಂದು ಘೋಷಿಸಿತು. ಅರ್ಹತಾ ಪಂದ್ಯ ವುಹಾನ್ನಲ್ಲಿ ರದ್ದುಗೊಂಡಿದೆ. ಇದು ಈಗ ಮಾರ್ಚ್ 3 ರಿಂದ 11 ರವರೆಗೆ ಅಮ್ಮನ್ನಲ್ಲಿ ನಡೆಯಲಿದೆ.
►ಬಾಸ್ಕೆಟ್ಬಾಲ್ : ಅಂತರ್ರಾಷ್ಟ್ರೀಯ ಬಾಸ್ಕೆಟ್ಬಾಲ್ ಫೆಡರೇಶನ್ ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಪಂದ್ಯಗಳನ್ನು ಫೋಶಾನ್ನಿಂದ ಬೆಲ್ಗ್ರಾಡ್ಗೆ ಸ್ಥಳಾಂತರಿಸಿದೆ.
ಫೆಬ್ರವರಿ 21 ರಂದು ಚಿಬಾದಲ್ಲಿ ನಡೆಯಬೇಕಾಗಿದ್ದ ಜಪಾನ್ ಮತ್ತು ಚೀನಾ ನಡುವಿನ ಎಫ್ಬಿಎ ಏಶ್ಯ ಕಪ್ 2021 ಅರ್ಹತಾ ಪಂದ್ಯವನ್ನು ಮುಂದೂಡಲಾಗಿದೆ.
ಫಿಲಿಪೈನ್ಸ್ -ಥಾಯ್ಲೆಂಡ್ (ಫೆ .20) ಮತ್ತು ಚೀನಾ -ಮಲೇಶ್ಯ (ಫೆ .24) ತಂಡಗಳ ನಡುವಿನ ಇತರ ಪಂದ್ಯಗಳನ್ನು ಸ್ಥಗಿತಗೊಳಿಸಲಾಗಿದೆ.
►ಜಿಮ್ನಾಸ್ಟಿಕ್ಸ್ : ಫೆಬ್ರವರಿ 20 ರಂದು ಮೆಲ್ಬೋರ್ನ್ನಲ್ಲಿ ನಡೆಯಲಿರುವ ವಿಶ್ವಕಪ್ನಿಂದ ಚೀನಾದ ಜಿಮ್ನಾಸ್ಟಿಕ್ಸ್ ತಂಡ ಹೊರಬಂದಿದೆ.
►ವಾಲಿಬಾಲ್: ಎಪ್ರಿಲ್ 22 ರಿಂದ 26 ರವರೆಗೆ ಯಾಂಗ್ಝೌನಲ್ಲಿ ನಡೆಯಬೇಕಿದ್ದ ಬೀಚ್ ವಾಲಿಬಾಲ್ ಪಂದ್ಯಾವಳಿಯನ್ನು ಟೋಕಿಯೊ 2020 ಒಲಿಂಪಿಕ್ಸ್ ಬಳಿಕ ನಡೆಸಲು ತೀರ್ಮಾನಿಸಲಾಗಿದೆ.
►ವೇಟ್ ಲಿಫ್ಟಿಂಗ್: ಏಶ್ಯನ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ಗಳನ್ನು ಕಝಖ್ಸ್ತಾನದಿಂದ ನೆರೆಯ ಉಜ್ಬೇಕಿಸ್ತಾನಕ್ಕೆ ಸ್ಥಳಾಂತರಿಸಲಾಗಿದೆ.
►ಕುಸ್ತಿ : ಭಾರತದಲ್ಲಿ ನಡೆಯಲಿರುವ ಏಶ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಚೀನಾ, ಉತ್ತರ ಕೊರಿಯಾ ಮತ್ತು ತುರ್ಕಮೆನಿಸ್ತಾನ ತಂಡಗಳು ಭಾಗವಹಿಸುವುದಿಲ್ಲ.