ನಡಾಲ್ ಸೆಮಿ ಫೈನಲ್ಗೆ ತೇರ್ಗಡೆ
ಎಟಿಪಿ ಮೆಕ್ಸಿಕೊ ಓಪನ್ ಟೆನಿಸ್ ಟೂರ್ನಿ
ಲಾಸ್ ಏಂಜಲಿಸ್, ಫೆ.28: ವಿಶ್ವದ ನಂ.2ನೇ ಆಟಗಾರ ರಫೆಲ್ ನಡಾಲ್ ದಕ್ಷಿಣ ಕೊರಿಯಾದ ಕ್ವಾನ್ ಸೂನ್-ವೂ ಅವರನ್ನು 6-2, 6-1 ನೇರ ಸೆಟ್ಗಳಿಂದ ಸೋಲಿಸುವುದರೊಂದಿಗೆ ಎಟಿಪಿ ಮೆಕ್ಸಿಕೊ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್ ತಲುಪಿದ್ದಾರೆ.
ಇಲ್ಲಿ ಗುರುವಾರ ನಡೆದ ಪುರುಷರ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ನಲ್ಲಿ ಜಯಶಾಲಿಯಾದ ಅಗ್ರ ಶ್ರೇಯಾಂಕದ ನಡಾಲ್ ಮೆಕ್ಸಿಕೊ ಓಪನ್ನಲ್ಲಿ ಮೂರನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ನಡಾಲ್ ಮುಂದಿನ ಸುತ್ತಿನಲ್ಲಿ ಗ್ರಿಗೊರ್ ಡಿಮಿಟ್ರೊವ್ರನ್ನು ಎದುರಿಸಲಿದ್ದಾರೆ. ಡಿಮಿಟ್ರೊವ್ ಮತ್ತೊಂದು ಕ್ವಾರ್ಟರ್ ಫೈನಲ್ನಲ್ಲಿ ಮೂರನೇ ಶ್ರೇಯಾಂಕದ ಸ್ಟಾನ್ ವಾವ್ರಿಂಕರನ್ನು 6-4, 6-4 ನೇರ ಸೆಟ್ಗಳಿಂದ ಸೋಲಿಸಿದ್ದಾರೆ.
2014ರ ಚಾಂಪಿಯನ್ ಡಿಮಿಟ್ರೊವ್ ಸ್ವಿಸ್ನ ವಾವ್ರಿಂಕ ವಿರುದ್ಧದ ಸತತ ಐದು ಪಂದ್ಯಗಳ ಸೋಲಿನಿಂದ ಹೊರಬಂದಿದ್ದಾರೆ. ಡಿಮಿಟ್ರೊವ್-ವಾವ್ರಿಂಕ 12 ಬಾರಿ ಮುಖಾಮುಖಿಯಾಗಿದ್ದು, ಇದೀಗ 5ನೇ ಬಾರಿ ಡಿಮಿಟ್ರೊವ್ಗೆ ಗೆಲುವು ಒಲಿದಿದೆ. ಮತ್ತೊಂದು ಸೆಮಿಫೈನಲ್ನಲ್ಲಿ ಅಮೆರಿಕದ ಆಟಗಾರರಾದ ಶ್ರೇಯಾಂಕರಹಿತ ಟೇಲರ್ ಫ್ರಿರ್ಟ್ಜ್ ಹಾಗೂ ಐದನೇ ಶ್ರೇಯಾಂಕದ ಜಾನ್ ಇಸ್ನೆರ್ ಮುಖಾಮುಖಿಯಾಗಲಿದ್ದಾರೆ.