ಯುಎಫ್ ಸಿ ಸೂಪರ್ ಸ್ಟಾರ್ ಖಬೀಬ್ ತಂದೆಗೆ ಅನಾರೋಗ್ಯ: ರಿಂಗ್ ಒಳಗಿನ ಎದುರಾಳಿ ಮೆಕ್ ಗ್ರೆಗರ್ ಅಚ್ಚರಿಯ ಟ್ವೀಟ್ !
ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್ ಶಿಪ್ (ಯುಎಫ್ ಸಿ)ಯಲ್ಲಿ ಪರಸ್ಪರ ಎದುರಾಳಿಗಳಾದ ಖಬೀಬ್ ಅಬ್ದುಲ್ ಮುನಾಫ್ ನೂರ್ ಮುಹಮ್ಮದ್ ಮತ್ತು ಮೆಕ್ ಗ್ರೆಗರ್ ವೈರತ್ವದ ಬಗ್ಗೆ ಎಲ್ಲರಿಗೂ ತಿಳಿದಿದೆ. ಕಳೆದ ಬಾರಿಯ ಚಾಂಪಿಯನ್ ಶಿಪ್ ಪಂದ್ಯದ ಬಳಿಕ ಇಬ್ಬರೂ ಹೊಡೆದಾಡಿಕೊಂಡ ಘಟನೆ ಈ ವೈರತ್ವವನ್ನು ಮತ್ತಷ್ಟು ಹೆಚ್ಚಿಸಿತ್ತು. ಆದರೆ ಈ ಇಬ್ಬರು ಚಾಂಪಿಯನ್ ಗಳ ನಡುವಿನ ಕೋಪ, ದ್ವೇಷಗಳು ರಿಂಗ್ ನೊಳಗೆ ಹೊರತು ಹೊರಗಲ್ಲ ಎನ್ನುವುದನ್ನು ಮೆಕ್ ಗ್ರೆಗರ್ ಅವರ ಟ್ವೀಟ್ ಒಂದು ಸಾಬೀತುಪಡಿಸಿದೆ.
ಖಬೀಬ್ ಅವರ ತಂದೆ, ಕೋಚ್ ಅಬ್ದುಲ್ ಮನಾಫ್ ಅನಾರೋಗ್ಯದಿಂದಿದ್ದು, ಮಾಸ್ಕೋದ ಆಸ್ಪತ್ರೆಯೊಂದಕ್ಕೆ ಅವರನ್ನು ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು, ಮನಾಫ್ ಕೋಮಾದಲ್ಲಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾನರ್ ಮೆಕ್ ಗ್ರೆಗರ್, “ಅಬ್ದುಲ್ ಮನಾಫ್ ಅವರ ಆರೋಗ್ಯ ಸ್ಥಿತಿ ಸುಧಾರಿಸಲು ಪ್ರಾರ್ಥಿಸುತ್ತೇನೆ. ಹಲವು ವಿಶ್ವ ಚಾಂಪಿಯನ್ ಗಳಿಗೆ ಕಾರಣರಾದವರು. ನಿಜವಾದ ಮಾರ್ಶಿಯಲ್ ಪ್ರತಿಭೆ. ಇಂದು ಈ ಸುದ್ದಿಯನ್ನು ಕೇಳಿ ದುಃಖವಾಗಿದೆ. ನೂರ್ ಮೊಹಮ್ಮದ್ ಮತ್ತು ಅವರ ಕುಟುಂಬಕ್ಕಾಗಿ ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.
ಮೆಕ್ ಗ್ರೆಗರ್ ರ ಈ ಟ್ವೀಟ್ ಬಗ್ಗೆ ಇಬ್ಬರು ಚಾಂಪಿಯನ್ ಗಳ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Respect
— SMJR (@AlSwearengen127) May 13, 2020