ಭಾರತ ವಿರುದ್ಧ ಟೆಸ್ಟ್ ಸರಣಿ: ಇಂಗ್ಲೆಂಡ್ ತಂಡ ಪ್ರಕಟ
ವೇಗದ ಬೌಲರ್ ಆ್ಯಂಡರ್ಸನ್ ಅಲಭ್ಯ
ಢಾಕಾ, ಅ.26: ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ 16 ಸದಸ್ಯರನ್ನು ಒಳಗೊಂಡ ಇಂಗ್ಲೆಂಡ್ ಕ್ರಿಕೆಟ್ ತಂಡ ಮಂಗಳವಾರ ಪ್ರಕಟವಾಗಿದ್ದು, ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ತಂಡದಿಂದ ಹೊರಗುಳಿದಿದ್ದಾರೆ.
ಆ್ಯಂಡರ್ಸನ್ ಇಂಗ್ಲೆಂಡ್ನ ಪರ 473 ವಿಕೆಟ್ಗಳನ್ನು ಪಡೆದು ಹೊಸ ದಾಖಲೆ ಬರೆದಿದ್ದಾರೆ. ಇದೀಗ ಭುಜ ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಆ್ಯಂಡರ್ಸನ್ ಮುಂದಿನ ತಿಂಗಳು ರಾಜ್ಕೋಟ್ನಲ್ಲಿ ಆರಂಭವಾಗಲಿರುವ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಈಗಾಗಲೇ ಹೊರಗುಳಿದಿದ್ದಾರೆ.
34ರ ಹರೆಯದ ಆ್ಯಂಡರ್ಸನ್ ಪ್ರಸ್ತುತ ಬಾಂಗ್ಲಾದೇಶ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡದಿಂದ ಹೊರಗುಳಿದಿದ್ದಾರೆ. ಗಾಯದಿಂದ ಚೇತರಿಸಿಕೊಂಡರೆ ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲಿ ತಂಡವನ್ನು ಸೇರ್ಪಡೆಯಾಗುವ ಸಾಧ್ಯತೆಯಿದೆ.
ಇಂಗ್ಲೆಂಡ್ನ ವೇಗದ ಬೌಲಿಂಗ್ ವಿಭಾಗದಲ್ಲಿ ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್, ಬೆನ್ ಸ್ಟೋಕ್ಸ್, ಸ್ಟೀವನ್ ಫಿನ್ ಹಾಗೂ ಜೇಕ್ ಬಾಲ್ ಅವರಿದ್ದಾರೆ. ಮೊಯಿನ್ ಅಲಿ, ಆದಿಲ್ ರಶೀದ್, ಗರೆತ್ ಬ್ಯಾಟಿ ಹಾಗೂ ಝಾಫರ್ ಅನ್ಸಾರಿ ಸ್ಪಿನ್ ವಿಭಾಗದಲ್ಲಿದ್ದಾರೆ.
ಇಂಗ್ಲೆಂಡ್ ತಂಡ ಭಾರತ ವಿರುದ್ಧ ನ.9 ರಂದು ಮೊದಲ ಟೆಸ್ಟ್ ಪಂದ್ಯ ಆಡಲಿದೆ. ಆ ನಂತರ ವಿಶಾಖಪಟ್ಟಣ, ಮೊಹಾಲಿ, ಮುಂಬೈ ಹಾಗೂ ಚೆನ್ನೈನಲ್ಲಿ ಉಳಿದ 4 ಪಂದ್ಯಗಳನ್ನು ಆಡಲಿದೆ.
ಟೆಸ್ಟ್ ತಂಡ: ಅಲೆಸ್ಟೈರ್ ಕುಕ್(ನಾಯಕ), ಮೊಯಿನ್ ಅಲಿ, ಝಾಫರ್ ಅನ್ಸಾರಿ, ಜಾನಿ ಬೈರ್ಸ್ಟೋ, ಜೇಕ್ ಬಾಲ್, ಗ್ಯಾರಿ ಬ್ಯಾಲನ್ಸ್, ಗಾರೆತ್ ಬ್ಯಾಟಿ, ಸ್ಟುವರ್ಟ್ ಬ್ರಾಡ್, ಜಾಸ್ ಬಟ್ಲರ್, ಬೆನ್ ಡಕೆಟ್, ಸ್ಟೀವನ್ ಫಿನ್, ಹಸೀಬ್ ಹಮೀದ್, ಆದಿಲ್ ರಶೀದ್, ಜೋ ರೂಟ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್.