ಎಎಫ್ಸಿ ಹಿರಿಯ ಉಪಾಧ್ಯಕ್ಷರಾಗಿ ಪ್ರಫುಲ್ ಪಟೇಲ್
ಅಬುಧಾಬಿ, ಡಿ.2: ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್ಎಫ್) ಅಧ್ಯಕ್ಷ ಪ್ರಫುಲ್ ಪಟೇಲ್ ಏಷ್ಯನ್ ಫುಟ್ಬಾಲ್ ಕಾನ್ಫೆಡರೇಶನ್ನ(ಎಎಫ್ಸಿ) ಹಿರಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಏಷ್ಯನ್ ಫುಟ್ಬಾಲ್ ಕಾನ್ಫೆಡರೇಶನ್ನ ಆಗ್ನೇಯ ವಲಯದ ಉಪಾಧ್ಯಕ್ಷರಾಗಿ ಸೇವೆಸಲ್ಲಿಸಿರುವ ಪಟೇಲ್ ತನಗೆ ಬೆಂಬಲ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಪಟೇಲ್ ನೇತೃತ್ವದಲ್ಲಿ ಭಾರತ 2017ರ ಫಿಫಾ ಅಂಡರ್-17 ವಿಶ್ವಕಪ್ ಆತಿಥ್ಯದ ಹಕ್ಕನ್ನು ಗೆದ್ದುಕೊಂಡಿದೆ. 2016ರ ಸೆಪ್ಟಂಬರ್ನಲ್ಲಿ ಎಎಫ್ಸಿ ಅಂಡರ್-16 ಚಾಂಪಿಯನ್ಶಿಪ್ನ್ನು ಆಯೋಜಿಸಿದೆ.
ಇದೇ ವೇಳೆ, ಕಳೆದ ರಾತ್ರಿ ನಡೆದ ಎಎಫ್ಸಿ ವಾರ್ಷಿಕ ಪ್ರಶಸ್ತಿ ಕಾರ್ಯಕ್ರಮದಲ್ಲಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್ಎಫ್) ವರ್ಷದ ಎಎಫ್ಸಿ ಅಭಿವೃದ್ದಿ ಸದಸ್ಯ ಅಸೋಸಿಯೇಶನ್ ಪ್ರಶಸ್ತಿಗೆ ಭಾಜನವಾಗಿದೆ. ಪಟೇಲ್ ಅವರು ಎಎಫ್ಸಿ ಉಪಾಧ್ಯಕ್ಷರಿಂದ ಪ್ರಶಸ್ತಿ ಸ್ವೀಕರಿಸಿದರು.
"ನಮ್ಮ ಪ್ರಯತ್ನವನ್ನು ಗುರುತಿಸಿರುವ ಎಎಫ್ಸಿಗೆ ಕೃತಜ್ಞತೆ ಸಲ್ಲಿಸಲು ಬಯಸುವೆ. ಭಾರತೀಯ ಫುಟ್ಬಾಲ್ ಕ್ರೀಡೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ' ಎಂದು ಪಟೇಲ್ ಹೇಳಿದ್ದಾರೆ.