ದಂಗಲ್ ಪ್ರಚಂಡ ಹಿಟ್, ಆದರೆ ಪೋಗಟ್ ಸೋದರಿಯರು ಔಟ್ ..!
ಹೊಸದಿಲ್ಲಿ,ಜ.9: ಬಾಲಿವುಡ್ ತಾರೆ ಆಮೀರ್ ಖಾನ್ ಅಭಿನಯದ ದಂಗಲ್ ಚಿತ್ರದ ಮೂಲಕ ದೇಶಾದ್ಯಂತ ಗಮನ ಸೆಳೆದಿರುವ ಕುಸ್ತಿ ಪಟುಗಳಾದ ಗೀತಾ ಪೋಗಟ್ ಹಾಗೂ ಬಬಿತಾ ಪೋಗಟ್ ಗಾಯದ ಕಾರಣದಿಂದಾಗಿ ಪ್ರೋ ಕುಸ್ತಿ ಲೀಗ್ ನಿಂದ ಹೊರಗುಳಿಯಲಿದ್ದಾರೆ
ದಂಗಲ್ ಚಿತ್ರ ಹಿಟ್ ಆಗಿರುವುದನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಉದ್ದೇಶಕ್ಕಾಗಿ ಉತ್ತರ ಪ್ರದೇಶದ ಫ್ರಾಂಚೈಸಿಯೊಂದು ತನ್ನ ತಂಡಕ್ಕೆ ಯುಪಿ ದಂಗಲ್ ಎಂದು ಹೆಸರಿಟ್ಟು, ಕುಸ್ತಿ ಪಟುಗಳಾದ ಗೀತಾ ಪೋಗಟ್ ಹಾಗೂ ಬಬಿತಾ ಪೋಗಟ್ ಸೋದರಿಯರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.
ಇದೀಗ ಫ್ರಾಚೈಂಸಿಗೆ ಗೀತಾ ಪೋಗಟ್ ಹಾಗೂ ಬಬಿತಾ ಪೋಗಟ್ ಸಹೋದರಿಯರನ್ನು ಸೇರಿಸಿಕೊಂಡು ಕೈ ಸುಟ್ಟುಕೊಳ್ಳುವಂತಾಗಿದೆ. ಬಬಿತಾ ಪೋಗಟ್ ಗಾಯಗೊಂಡಿರುವ ಕಾರಣದಿಂದಾಗಿ ಪ್ರೋ ಕುಸ್ತಿ ಲೀಗ್ ನಿಂದ ದೂರ ಉಳಿಯಲಿದ್ದಾರೆ. ಗೀತಾ ಪೋಗಟ್ ಜ್ವರದ ಕಾರಣದಿಂದಾಗಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಭಾರತದ ಕುಸ್ತಿ ಒಕ್ಕೂಟ( ಡಬ್ಲ್ಯುಎಫ್ ಐ) ಇಬ್ಬರು ಕುಸ್ತಿಪಟುಗಳ ಬದಲಿಗೆ ಬೇರೆ ಕುಸ್ತಿ ಪಟುಗಳನ್ನು ಆಯ್ಕೆ ಮಾಡಲು ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.
ಬಬಿತಾ ಬದಲಿಗೆ 53 ಕೆ.ಜಿ. ವಿಭಾಗದಲ್ಲಿ ಪಿಂಕಿ ಮತ್ತು ಗೀತಾ ಬದಲಿಗೆ 58 ಕೆ.ಜಿ. ವಿಭಾಗದಲ್ಲಿ ಮಾನಿಶಾ ಅವರನ್ನು ಸ್ಪರ್ಧಾ ಕಣಕ್ಕಿಳಿಸಲು ತಯಾರಿ ನಡೆದಿದೆ. ಇದೇ ವೇಳೆ 58 ಕೆ.ಜಿ. ಮೇಲ್ಪಟ್ಟ ವಿಭಾಗದಲ್ಲಿ ಹಣಾಹಣಿಗೆ ಸಿದ್ದವಾಗಿದ್ದ ರೇಶ್ಮಾ ಮಾನೆ ಅವರಿಗೆ ತೂಕವನ್ನು ಕಡಿಮೆ ಮಾಡಲು ಸೂಚನೆ ನೀಡಲಾಗಿದ್ದು, ಅವರನ್ನು ಗೀತಾ ಬದಲಿಗೆ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಮಾನಿಶಾ ಅವರಿಗಿಂತ ರೇಶ್ಮಾ ಬಲಿಷ್ಠ ಕುಸ್ತಿಪಟು ಎನ್ನುವುದು ಫ್ರಾಂಚೈಸಿ ತಂಡದ ಲೆಕ್ಕಚಾರ.
ಕಳೆದ ರಾತ್ರಿ ನಡೆದ ಪ್ರೋ ಕುಸ್ತಿ ಲೀಗ್ ನ 58 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಗೀತಾ ಬದಲಿಗೆ ಕಣಕ್ಕಿಳಿದ ಮಾನಿಶಾ ಅವರು ಮುಂಬೈ ತಂಡದ ಸರಿತಾಗೆ 1-9 ಅಂತರದಲ್ಲಿ ಶರಣಾಗಿದ್ದರು.