ಆಸ್ಟ್ರೇಲಿಯನ್ ಓಪನ್: ಸಾನಿಯಾ ಮೂರನೆ ಸುತ್ತಿಗೆ, ಬೋಪಣ್ಣ ಔಟ್
ಹೊಸದಿಲ್ಲಿ, ಜ.20: ವರ್ಷದ ಮೊದಲ ಗ್ರಾನ್ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್ನಲ್ಲಿ ಭಾರತೀಯ ಟೆನಿಸ್ ಆಟಗಾರರು ಮಿಶ್ರ ಫಲ ಕಂಡಿದ್ದಾರೆ. ಮಹಿಳೆಯರ ಡಬಲ್ಸ್ನಲ್ಲಿ ಸಾನಿಯಾ ಮಿರ್ಝಾ ಮೂರನೆ ಸುತ್ತಿಗೆ ತೇರ್ಗಡೆಯಾದರೆ, ರೋಹನ್ ಬೋಪಣ್ಣ ಪುರುಷರ ಡಬಲ್ಸ್ ಸ್ಪರ್ಧೆಯಿಂದ ಹೊರ ನಡೆದರು.
ಇಲ್ಲಿ ಶುಕ್ರವಾರ 1 ಗಂಟೆ, 21 ನಿಮಿಷಗಳ ಕಾಲ ನಡೆದ ಮಹಿಳೆಯರ ಡಬಲ್ಸ್ನ ಎರಡನೆ ಸುತ್ತಿನ ಪಂದ್ಯದಲ್ಲಿ ನಾಲ್ಕನೆ ಶ್ರೇಯಾಂಕದ ಸಾನಿಯಾ ಹಾಗೂ ಅವರ ಝೆಕ್ ಜೊತೆಗಾರ್ತಿ ಬಾರ್ಬೊರ ಸ್ಟ್ರೈಕೋವಾ ಆಸ್ಟ್ರೇಲಿಯ-ಚೀನಾದ ಜೋಡಿ ಸಮಂತಾ ಸ್ಟೋಸರ್ ಹಾಗೂ ಶುಐ ಝಾಂಗ್ರನ್ನು 6-1, 6-4 ನೇರ ಸೆಟ್ಗಳಿಂದ ಸೋಲಿಸಿ ಮೂರನೆ ಸುತ್ತಿಗೆ ಲಗ್ಗೆ ಇಟ್ಟರು.
ಪುರುಷರ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ ಹೋರಾಟಕ್ಕೆ ತೆರೆ ಬಿದ್ದಿದೆ. ಅವರು ತಮ್ಮ ಹೊಸ ಪಾರ್ಟ್ನರ್ ಉರುಗ್ವೆಯ ಪಾಬ್ಲೊ ಕ್ಯೂವಾಸ್ರೊಂದಿಗೆ ಎರಡನೆ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಜೋಡಿ ಅಲೆಕ್ಸ್ ಬೋಲ್ಟ್ ಹಾಗೂ ಬ್ರಾಡ್ಲಿ ವೌಸ್ಲೆ ಅವರನ್ನು ಎದುರಿಸಿದರು.
ಆದರೆ, 15ನೆ ಶ್ರೇಯಾಂಕದ ಬೋಪಣ್ಣ-ಪಾಬ್ಲೊ ಜೋಡಿ ಶ್ರೇಯಾಂಕರಹಿತ ಎದುರಾಳಿ ವಿರುದ್ಧ 6-2, 6-7(2), 4-6 ಸೆಟ್ಗಳ ಅಂತರದಿಂದ ಸೋತರು.
ಭಾರತದ ಹಿರಿಯ ಟೆನಿಸ್ಪಟು ಲಿಯಾಂಡರ್ ಪೇಸ್ ಹಾಗೂ ಅವರ ಜೊತೆಗಾರ ಬ್ರೆಝಿಲ್ನ ಆ್ಯಂಡ್ರೆ ಸಾ, ಪೂರವ್ ರಾಜಾ ಹಾಗೂ ದಿವಿಜ್ ಶರಣ್ ಅವರು ಈಗಾಗಲೇ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ.