ಇಂಗ್ಲೆಂಡ್ ತಂಡ ಪ್ರಕಟ, ಹೊಸ ಮುಖ ಡಾಸನ್ಗೆ ಅವಕಾಶ
ಲಂಡನ್, ಫೆ.10: ಇಂಗ್ಲೆಂಡ್ ತಂಡ ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ಗೆ ತಂಡವನ್ನು ಬುಧವಾರ ಆಯ್ಕೆ ಮಾಡಿದೆ. ಹ್ಯಾಂಪ್ಶೈರ್ ಆಲ್ರೌಂಡರ್ ಲಿಯಾಮ್ ಡಾಸನ್ಗೆ ಇದೇ ಮೊದಲ ಬಾರಿ ಅವಕಾಶ ಕಲ್ಪಿಸಲಾಗಿದೆ.
ಇತ್ತೀಚೆಗೆ ಯುಎಇನಲ್ಲಿ ನಡೆದ ಪಾಕಿಸ್ತಾನ ಎ ವಿರುದ್ಧ ಇಂಗ್ಲೆಂಡ್ ಲಯನ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದ ಡಾಸನ್ ಸದ್ಯ ದಕ್ಷಿಣ ಆಫ್ರಿಕ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡದಲ್ಲೂ ಸ್ಥಾನ ಪಡೆದಿದ್ದರು.
ಇತ್ತೀಚೆಗೆ ದಕ್ಷಿಣ ಆಫ್ರಿಕ ಹಾಗೂ ಆಸ್ಟ್ರೇಲಿಯದ ದೇಶೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕೆವಿನ್ ಪೀಟರ್ಸನ್ರನ್ನು ಕಡೆಗಣಿಸಲಾಗಿದೆ. ಗಾಯದ ಸಮಸ್ಯೆಯಿಂದಾಗಿ ಆಫ್ರಿಕ ಪ್ರವಾಸದಿಂದ ಹೊರಗುಳಿದ ಹೊರತಾಗಿಯೂ ವೇಗದ ಬೌಲರ್ ಸ್ಟೀವನ್ ಫಿನ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ವಿಶ್ವದ ನಂ.1 ಟೆಸ್ಟ್ ಬೌಲರ್ ಸ್ಟುವರ್ಟ್ ಬ್ರಾಡ್ ಇದೇ ಮೊದಲ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿಲ್ಲ. ಮಾ.16 ರಂದು ವೆಸ್ಟ್ಇಂಡೀಸ್ನ್ನು ಎದುರಿಸುವುದರೊಂದಿಗೆ ಇಂಗ್ಲೆಂಡ್ ತಂಡ ವಿಶ್ವಕಪ್ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಇಂಗ್ಲೆಂಡ್ 2010ರಲ್ಲಿ ವೆಸ್ಟ್ಇಂಡೀಸ್ನಲ್ಲಿ ನಡೆದಿದ್ದ ಟ್ವೆಂಟಿ-20 ವಿಶ್ವಕಪ್ನಲ್ಲಿ ಚಾಂಪಿಯನ್ ಆಗಿತ್ತು.
ಇಂಗ್ಲೆಂಡ್ ತಂಡ: ಇಯಾನ್ ಮೊರ್ಗನ್(ನಾಯಕ), ಮೊಯೀನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಜೊಸ್ ಬಟ್ಲರ್, ಲಿಯಾಮ್ ಡಾಸನ್, ಸ್ಟೀವನ್ ಫಿನ್, ಅಲೆಕ್ಸ್ ಹ್ಯಾಲೆಸ್, ಕ್ರಿಸ್ ಜೋರ್ಡನ್, ಆದಿಲ್ ರಶೀದ್, ಜೋ ರೂಟ್, ಜಾಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟಾಪ್ಲೆ, ಜೇಮ್ಸ್ ವಿನ್ಸಿ ಹಾಗೂ ಡೇವಿಡ್ ವಿಲ್ಲಿ.