ರಹಾನೆ ಬಳಗದ ಯುಗಾದಿ ಉಡುಗೊರೆ
ಅಂತಿಮ ಟೆಸ್ಟ್ನಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ 8 ವಿಕೆಟ್ಗಳ ಜಯ * ಸರಣಿ 2-1 ವಶ
ಧರ್ಮಶಾಲಾ, ಮಾ.28: ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ ಅರ್ಧಶತಕ (51) ಮತ್ತು ಹಂಗಾಮಿ ನಾಯಕ ಅಜಿಂಕ್ಯ ರಹಾನೆ(38) ನೆರವಿನಲ್ಲಿ ಭಾರತ ಇಲ್ಲಿ ನಡೆದ ನಾಲ್ಕನೆ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ನಲ್ಲಿ ಆಸ್ಟ್ರೇಲಿಯ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಗಳಿಸಿದೆ.
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯದ ನಾಲ್ಕನೆ ದಿನವಾಗಿರುವ ಇಂದು ಭಾರತ ಎರಡನೆ ಇನಿಂಗ್ಸ್ನಲ್ಲಿ 23.5 ಓವರ್ಗಳಲ್ಲಿ 2ವಿಕೆಟ್ ನಷ್ಟದಲ್ಲಿ 106 ರನ್ ಗಳಿಸುವ ಮೂಲಕ ಗೆಲುವಿನ ದಡ ಸೇರಿತು.
ಮೂರನೆ ದಿನದಾಟದಂತ್ಯಕ್ಕೆ 6 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿದ್ದ ಭಾರತ ಇಂದು ಬ್ಯಾಟಿಂಗ್ ಮುಂದುವರಿಸಿ ಗೆಲುವಿಗೆ ಅಗತ್ಯದ 87 ರನ್ ಸೇರಿಸಿತು.ಸರಣಿಯಲ್ಲಿ ಆರನೆ ಅರ್ಧಶತಕ ದಾಖಲಿಸಿರುವ ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ ಔಟಾಗದೆ 51 ರನ್(110ನಿ, 76ಎ, 9ಬೌ) ಮತ್ತು ಅಜಿಂಕ್ಯ ರಹಾನೆ ಔಟಾಗದೆ 38 ರನ್(43ನಿ, 27ಎ, 4ಬೌ, 2ಸಿ) ಗಳಿಸಿ ತಂಡದ ಗೆಲುವಿಗೆ ಅಗತ್ಯದ ರನ್ ಪೂರೈಸಿದರು.
24ನೆ ಓವರ್ನ 5ನೆ ಎಸೆತದಲ್ಲಿ ರಾಹುಲ್ ಅವರು ಓ’ಕೀಫೆ ಎಸೆತದಲ್ಲಿ 2 ರನ್ ಗಳಿಸುವ ಮೂಲಕ ಸರಣಿಯಲ್ಲಿ ಆರನೆ ಅರ್ಧಶತಕ ಪೂರೈಸಿದರು. ಇದರ ಜೊತೆ ಭಾರತದ ಗೆಲುವನ್ನು ದೃಢಪಡಿಸಿದರು. ಟೆಸ್ಟ್ ಮುಗಿಯಲು ಒಂದೂವರೆ ದಿನ ಬಾಕಿ ಇರುವಾಗಲೇ ಭಾರತ ಗೆಲುವಿನ ನಗೆ ಬೀರಿದೆ.
ಸೋಮವಾರ ದಿನದಾಟದಂತ್ಯಕ್ಕೆ ಔಟಾಗದೆ 13 ರನ್ ಗಳಿಸಿದ್ದ ಲೋಕೇಶ್ ರಾಹುಲ್ ಮತ್ತು ಮುರಳಿ ವಿಜಯ್ ಮೊದಲ ವಿಕೆಟ್ಗೆ ಜೊತೆಯಾಟದಲ್ಲಿ 46 ರನ್ಗಳ ಕೊಡುಗೆ ನೀಡಿದರು.
14ನೆ ಓವರ್ನ ಮೊದಲ ಎಸೆತದಲ್ಲಿ ಮುರಳಿ ವಿಜಯ್ ಅವರು ಪ್ಯಾಟ್ ಕಮಿನ್ಸ್ ಎಸೆತದಲ್ಲಿ ವಿಕೆಟ್ ಕೀಪರ್ ಪ್ಯಾಟ್ ಕಮಿನ್ಸ್ಗೆ ಕ್ಯಾಚ್ ನೀಡಿದರು. ವಿಜಯ್61 ನಿಮಿಷಗಳ ಕಾಲ ಕ್ರೀಸ್ನಲ್ಲಿ ತಳವೂರಿ 35 ಎಸೆತಗಳನ್ನು ಎದರಿಸಿ 8 ರನ್ ಗಳಿಸಿದರು.
ಎರಡನೆ ವಿಕೆಟ್ಗೆ ರಾಹುಲ್ಗೆ ಜೊತೆಯಾದ ಚೇತೇಶ್ವರ ಪೂಜಾರ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. 14ನೆ ಓವರ್ನ ಕೊನೆಯ ಎಸೆತದಲ್ಲಿ ಅನಗತ್ಯವಾಗಿ ರನ್ ಕದಿಯಲು ಹೋಗಿ ಪೂಜಾರ ರನೌಟಾದರು. ಪೂಜಾರ 5 ಎಸೆತಗಳನ್ನು ಎದುರಿಸಿದರೂ ಖಾತೆ ತೆರೆಯಲಿಲ್ಲ. ಸರಣಿಯಲ್ಲಿ ಭಾರತದ ಪರ ಗರಿಷ್ಠ ಸ್ಕೋರ್ ದಾಖಲಿಸಿರುವ ಪೂಜಾರ ನಿರಾಶೆಯಿಂದಲೇ ಪೆವಿಲಿಯನ್ ಸೇರಿದರು. ಪೂಜಾರ ನಿರ್ಗಮನದ ಬಳಿಕ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಅವರು ರಾಹುಲ್ಗೆ ಜೊತೆಯಾದರು. ಇವರು ಮುರಿಯದ ಜೊತೆಯಾಟದಲ್ಲಿ 64 ರನ್ ತಂಡದ ಖಾತೆಗೆ ಸೇರ್ಪಡೆಗೊಂಡಿತು.
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಂತಿಮ ಟೆಸ್ಟ್ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ರಹಾನೆ ಏಕದಿನ ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿದ್ದರು. 20ನೆ ಓವರ್ನಲ್ಲಿ ಪ್ಯಾಟ್ ಕಮಿನ್ಸ್ ಓವರ್ನಲ್ಲಿ ಚೆಂಡನ್ನು ಎರಡು ಬಾರಿ ಸಿಕ್ಸರ್ಗೆ ಅಟ್ಟಿದರು.
ರಹಾನೆ ಈ ಗೆಲುವಿನೊಂದಿಗೆ ತಮಗೆ ದೊರೆತ ಅವಕಾಶವನ್ನು ಸ್ಮರಣೀಯವನ್ನಾಗಿಸಿದರು.
ಆಸ್ಟ್ರೇಲಿಯದ ಪರ ಪ್ಯಾಟ್ ಕಮಿನ್ಸ್ 1 ವಿಕೆಟ್ ಪಡೆದರು. ಭಾರತ ಆಲ್ರೌಂಡರ್ ರವೀಂದ್ರ ಜಡೇಜ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಭಾರತ ತವರಿನಲ್ಲಿ ನಡೆದ 13 ಟೆಸ್ಟ್ಗಳಲ್ಲಿ ಕೇವಲ 1 ಟೆಸ್ಟ್ನಲ್ಲಿ ಸೋಲು ಅನುಭವಿಸಿತ್ತು.
,,,,,,,,,,
ರಾಹುಲ್ ಸರಣಿಯಲ್ಲಿ ಆರನೆ ಅರ್ಧಶತಕ
ಧರ್ಮಶಾಲಾ, ಮಾ.28: ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ ಇಲ್ಲಿ ನಡೆದ ಅಂತಿಮ ಟೆಸ್ಟ್ನಲ್ಲಿ ಅರ್ಧ ಶತಕ ದಾಖಲಿಸುವ ಮೂಲಕ ಸರಣಿಯಲ್ಲಿ 6ನೆ ಅರ್ಧಶತಕ ದಾಖಲಿಸಿದ್ದಾರೆ.
ಕರ್ನಾಟಕದ ಲೋಕೇಶ್ ರಾಹುಲ್ ಅವರು 17ನೆ ಟೆಸ್ಟ್ನಲ್ಲಿ 7ನೆ ಅರ್ಧಶತಕ ದಾಖಲಿಸಿದ್ದಾರೆ. ಅವರಿಗೆ ತವರಿನಲ್ಲಿ ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಶತಕ ದಾಖಲಿಸಲು ಸಾಧ್ಯವಾಗಲಿಲ್ಲ. ಬೆಂಗಳೂರಿನಲ್ಲಿ ಎರಡನೆ ಟೆಸ್ಟ್ನಲ್ಲಿ ಶತಕದಂಚಿನಲ್ಲಿ ಎಡವಿದ್ದರು.
ರಾಹುಲ್ ಪುಣೆಯಲ್ಲಿ 64 ರನ್ ಗಳಿಸುವ ಮೂಲಕ ಸರಣಿಯಲ್ಲಿ ಮೊದಲ ಅರ್ಧಶತಕ ದಾಖಲಿಸಿದ್ದರು. ಎರಡನೆ ಇನಿಂಗ್ಸ್ನಲ್ಲಿ 10 ರನ್ ಗಳಿಸಿದ್ದರು.
ಬೆಂಗಳೂರಿನಲ್ಲಿ ಎರಡನೆ ಟೆಸ್ಟ್ನಲ್ಲಿ 90 ರನ್ ಗಳಿಸಿದ್ದ ರಾಹುಲ್ ಎರಡನೆ ಇನಿಂಗ್ಸ್ನಲ್ಲಿ 51 ರನ್ ಗಳಿಸಿ ಔಟಾಗಿದ್ದರು.
ರಾಂಚಿಯಲ್ಲಿ ಮೂರನೆ ಟೆಸ್ಟ್ನಲ್ಲಿ 67 ರನ್ ಜಮೆ ಮಾಡಿದ್ದರು. ಎರಡನೆ ಟೆಸ್ಟ್ನಲ್ಲಿ ಎರಡೂ ಇನಿಂಗ್ಸ್ಗಳಲ್ಲಿ ಅರ್ಧಶತಕ ಜಮೆ ಮಾಡಿದ್ದ ರಾಹುಲ್ ಅಂತಿಮ ಟೆಸ್ಟ್ನಲ್ಲೂ 2 ಅರ್ಧಶಕಗಳನ್ನು ಜಮೆ ಮಾಡಿದ್ದರು.
24ರ ಹರೆಯದ ಕರ್ನಾಟಕದ ಬಲಗೈ ಬ್ಯಾಟ್ಸ್ಮನ್ ರಾಹುಲ್ ಈ ಸರಣಿಯಲ್ಲಿ 393 ರನ್ ಗಳಿಸಿ ಗರಿಷ್ಠ ರನ್ ಗಳಿಸಿದ ದಾಂಡಿಗರ ಪೈಕಿ ಮೂರನೆ ಸ್ಥಾನ ಪಡೆದಿದ್ದಾರೆ.ರಾಹುಲ್ ಈ ವರೆಗೆ ಟೆಸ್ಟ್ನಲ್ಲಿ 4 ಶತಕ ಗಳಿಸಿದ್ದಾರೆ.
,,,,,,,,,,
ಪಂದ್ಯ ಶ್ರೇಷ್ಠ - ಸರಣಿ ಶ್ರೇಷ್ಠ ಜಡೇಜ :
ಆಲ್ರೌಂಡರ್ ರವೀಂದ್ರ ಜಡೇಜ ಭಾರತದ ಸರಣಿ ಗೆಲುವಿನಲ್ಲಿ ದೊಡ್ಡ ಕೊಡುಗೆ ನೀಡಿದವರು. 4 ಟೆಸ್ಟ್ಗಳಲ್ಲಿ 25 ವಿಕೆಟ್ ಮತ್ತು 151 ರನ್ ದಾಖಲಿಸಿರುವ ಜಡೇಜ ಸರಣಿ ಶ್ರೇಷ್ಠ ಮತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಐಸಿಸಿ ಟೆಸ್ಟ್ ಬೌಲರ್ಗಳ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನ ಪಡೆದಿರುವ ಜಡೇಜ ಭಾರತಕ್ಕೆ ಅಂತಿಮ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ 63 ರನ್ಗಳ ಕೊಡುಗೆ ನೀಡಿ ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ಆಟಗಾರ ಎನಿಸಿಕೊಂಡಿದ್ದರು. ಅವರು ವೃದ್ಧಿಮಾನ್ ಸಹಾ ಜೊತೆ 7ನೆ ವಿಕೆಟ್ಗೆ 96 ರನ್ಗಳ ಜೊತೆಯಾಟ ನೀಡಿ ಭಾರತಕ್ಕೆ 36 ರನ್ಗಳ ಮೇಲುಗೈ ಸಾಧಿಸಲು ನೆರವಾಗಿದ್ದರು.
ಮೊದಲ ಇನಿಂಗ್ಸ್ನಲ್ಲಿ 57ಕ್ಕೆ 1 ವಿಕೆಟ್ ಪಡೆದಿದ್ದ ಜಡೇಜ ಎರಡನೆ ಇನಿಂಗ್ಸ್ನಲ್ಲಿ 24ಕ್ಕೆ 3 ವಿಕೆಟ್ ಪಡೆದಿದ್ದರು. ರಾಂಚಿ ಟೆಸ್ಟ್ನಲ್ಲಿ ವೇಗದ ಅರ್ಧಶತಕ ದಾಖಲಿಸಿದ್ದ ಜಡೇಜ 9 ವಿಕೆಟ್ಗಳನ್ನು ಪಡೆದಿದ್ದರು. ಪುಣೆಯಲ್ಲಿ ಮೊದಲ ಟೆಸ್ಟ್ನಲ್ಲಿ 5 ವಿಕೆಟ್, ಬೆಂಗಳೂರು ಟೆಸ್ಟ್ನಲ್ಲಿ 7 ವಿಕೆಟ್ ಉಡಾಯಿಸಿದ್ದರು.
ಜಡೇಜ ಭಾರತದ ನೆಲದಲ್ಲಿ 22 ಟೆಸ್ಟ್ಗಳಲ್ಲಿ 122 ವಿಕೆಟ್ಗಳನ್ನು ಎಗರಿಸಿರುವ ಸಾಧನೆ ಮಾಡಿದ್ಧಾರೆ.
ನಂ.1 ಸ್ಥಾನ ವಶಪಡಿಸಿಕೊಂಡ ಭಾರತ
ಧರ್ಮಶಾಲಾ, ಮಾ.27: ಆಸ್ಟ್ರೇಲಿಯ ವಿರುದ್ಧ ನಾಲ್ಕು ಟೆಸ್ಟ್ಗಳ ಸರಣಿಯಲ್ಲಿ 2-1 ಅಂತರದಲ್ಲಿ ಜಯ ಗಳಿಸುವ ಮೂಲಕ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಎತ್ತಿಕೊಂಡಿರುವ ಭಾರತ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನವನ್ನು ಉಳಿಸಿಕೊಂಡಿದೆ.
ಅಂತಿಮ ಟೆಸ್ಟ್ನ್ನು ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಜಯಿಸಿರುವುದು ವಿಶೇಷ. ಪುಣೆಯಲ್ಲಿ ಮೊದಲ ಟೆಸ್ಟ್ನಲ್ಲಿ 333 ರನ್ಗಳ ಅಂತರದಲ್ಲಿ ಸೋಲು ಅನುಭವಿಸಿ ಸಾರ್ವತ್ರಿಕವಾಗಿ ಟೀಕೆ ಎದುರಿಸಿದ್ದ ಭಾರತ ಬಳಿಕ ಚೇತರಿಸಿಕೊಂಡು ಬೆಂಗಳೂರಿನಲ್ಲಿ ಎರಡನೆ ಟೆಸ್ಟ್ನಲ್ಲಿ ಆಸ್ಟ್ರೇಲಿಯಕ್ಕೆ ತಿರುಗೇಟು ನೀಡಿತ್ತು. ರಾಂಚಿಯಲ್ಲಿ ಮೂರನೆ ಟೆಸ್ಟ್ನಲ್ಲಿ ಗೆಲುವಿಗೆ ಅವಕಾಶ ಇದ್ದರೂ ಅಂತಿಮ ದಿನ ಬೌಲರ್ಗಳ ದುರ್ಬಲ ಬೌಲಿಂಗ್ನಿಂದಾಗಿ ಆಸ್ಟ್ರೇಲಿಯನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ. ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು. ಅಂತಿಮ ಟೆಸ್ಟ್ನಲ್ಲಿ ಉಭಯ ತಂಡಗಳೂ ಒತ್ತಡಕ್ಕೆ ಸಿಲುಕಿತ್ತು. ಆದರೆ ತವರಿನ ವಾತಾವರಣದ ಲಾಭ ಪಡೆದ ಭಾರತ ಗೆಲುವಿನೊಂದಿಗೆ ಸರಣಿ ಗೆಲುವನ್ನು ತನ್ನದಾಗಿಸಿಕೊಂಡಿತು.
ಆಸ್ಟ್ರೇಲಿಯ -ಭಾರತ ತಂಡಗಳ ನಡುವಿನ ಬಾರ್ಡರ್ -ಗವಾಸ್ಕರ್ ಸರಣಿ ಹಲವು ಸ್ಮರಣೀಯ ದಾಖಲೆಗಳಿಗೆ ಸಾಕ್ಷಿಯಾಗಿತ್ತು.
,,,,,,,
ಸ್ಕೋರ್ ಪಟ್ಟಿ
ಆಸ್ಟ್ರೇಲಿಯ ಮೊದಲ ಇನಿಂಗ್ಸ್ 300
ಭಾರತ ಮೊದಲ ಇನಿಂಗ್ಸ್ 332
ಆಸ್ಟ್ರೇಲಿಯ ಎರಡನೆ ಇನಿಂಗ್ಸ್ 137
ಭಾರತ ಎರಡನೆ ಇನಿಂಗ್ಸ್ 23.5 ಓವರ್ಗಳಲ್ಲಿ 2ವಿಕೆಟ್ ನಷ್ಟಕ್ಕೆ 106
ರಾಹುಲ್ ಔಟಾಗದೆ 51
ವಿಜಯ್ ಸಿ ವೇಡ್ ಬಿ ಕಮಿನ್ಸ್ 08
ಪೂಜಾರ ರನೌಟ್(ಮ್ಯಾಕ್ಸ್ವೆಲ್) 00
ಅಜಿಂಕ್ಯ ರಹಾನೆ ಔಟಾಗದೆ 38
ಇತರೆ09
ವಿಕೆಟ್ ಪತನ: 1-46, 2-46
ಬೌಲಿಂಗ್ವಿವರ
ಕಮಿನ್ಸ್ 8.0-2-42-1
ಹೇಝಲ್ವುಡ್ 6.0-2-14-0
ಓ’ಕೀಫೆ 4.5-1-22-0
ಲಿಯೊನ್ 5.0-0-19-0
ಅಂಕಿ -ಅಂಶ
*6: ಲೋಕೇಶ್ ರಾಹುಲ್ ಸರಣಿಯಲ್ಲಿ 6 ಅರ್ಧಶತಕಗಳನ್ನು ದಾಖಲಿಸಿದ್ದಾರೆ.
*4: ಭಾರತ 4 ಟೆಸ್ಟ್ ಸರಣಿಗಳಲ್ಲಿ ಮೊದಲ ಟೆಸ್ಟ್ನಲ್ಲಿ ಸೋಲು ಅನುಭವಿಸಿ ಬಳಿಕ ಚೇತರಿಸಿಕೊಂಡು ಸರಣಿ ಗೆಲುವ ದಾಖಲಿಸಿದೆ.
*9: ಹಂಗಾಮಿ ನಾಯಕ ಅಜಿಂಕ್ಯ ರಹಾನೆ ನಾಯಕತ್ವ ವಹಿಸಿದ ಮೊದಲ ಟೆಸ್ಟ್ನಲ್ಲಿ ಗೆಲುವಿನೊಂದಿಗೆ ನಾಯಕತ್ವದ ಚೊಚ್ಚಲ ಟೆಸ್ಟ್ನಲ್ಲಿ ಜಯ ಗಳಿಸಿದ 9ನೆ ನಾಯಕ ಎನಿಸಿಕೊಂಡಿದ್ದಾರೆ ರಹಾನೆ.
*10: ಭಾರತ 2016-17ನೆ ಸಾಲಿನಲ್ಲಿ 10 ಟೆಸ್ಟ್ಗಳಲ್ಲಿ ಜಯ ಗಳಿಸಿದೆ.
*21: ಆಸ್ಟ್ರೇಲಿಯ ಭಾರತದಲ್ಲಿ ಆಡಿದ 50 ಟೆಸ್ಟ್ಗಳ ಪೈಕಿ 21ರಲ್ಲಿ ಸೋಲು ಅನುಭವಿಸಿದೆ.
*7:ಭಾರತ ಸತತ 7 ಸರಣಿ ಜಯ ದಾಖಲಿಸಿದೆ.
*1562: ಭಾರತ 1562 ದಿನಗಳ ಮೊದಲು ತವರಲ್ಲಿ ಭಾರತ ಸರಣಿ ಸೋಲು ಅನುಭವಿಸಿತ್ತು. ಡಿಸೆಂಬರ್ 2012ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋಲು ಅನುಭವಿಸಿತ್ತು.
*4: ಆಸ್ಟ್ರೇಲಿಯ ವಿರುದ್ಧ ಸತತ 4 ಸರಣಿಗಳಲ್ಲಿ ಜಯ ಗಳಿಸಿದೆ.
*499: ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ 4 ಟೆಸ್ಟ್ಗಳಲ್ಲಿ 3 ಶತಕಗಳನ್ನು ಒಳಗೊಂಡ 499 ರನ್ ಗಳಿಸಿದ್ದಾರೆ.
*3: ಜಡೇಜ : ಪ್ರಸ್ತುತ ಸಾಲಿನಲ್ಲಿ 3 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.