ಮಗುವಿನ ನಿರೀಕ್ಷೆಯಲ್ಲಿ ಟೆನಿಸ್ ಸೂಪರ್ ಸ್ಟಾರ್ ಸೆರೆನಾ
ನ್ಯೂಯಾರ್ಕ್, ಎ.20: ಕಳೆದ ಎರಡು ದಶಕಗಳ ಕಾಲ ಟೆನಿಸ್ ಲೋಕವನ್ನು ಆಳಿದ್ದ ಅಮೆರಿಕದ ಟೆನಿಸ್ ಸೂಪರ್ ಸ್ಟಾರ್ ಸೆರೆನಾ ವಿಲಿಯಮ್ಸ್ 2017ರಲ್ಲಿ ಹೆರಿಗೆ ರಜೆ ಪಡೆಯಲಿದ್ದಾರೆ. 35ರ ಹರೆಯದ ಸೆರೆನಾ ಈಗ ಗರ್ಭಿಣಿಯಾಗಿದ್ದಾರೆ ಎಂದು ಟೆನಿಸ್ ತಾರೆಯ ವಕ್ತಾರರು ಬುಧವಾರ ದೃಢಪಡಿಸಿದ್ದಾರೆ.
ಸೆರೆನಾ ಮುಂದಿನ ವಾರ ವಿಶ್ವದ ನಂ.1 ಸ್ಥಾನ ವಶಪಡಿಸಿಕೊಳ್ಳುವ ಮೊದಲೇ ಈ ವಿಷಯ ಬಹಿರಂಗವಾಗಿದೆ. ಸೆರೆನಾ ಹಳದಿ ಬಣ್ಣದ ಈಜುಡುಗೆಯನ್ನು ತೊಟ್ಟು, ‘‘20 ವಾರಗಳು’’ ಎಂದು ಅಡಿಬರಹವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು. ತಕ್ಷಣವೇ ಟ್ವಿಟರ್ನ್ನು ಅಳಿಸಿಹಾಕಿದ್ದರು.
‘‘ಸೆರೆನಾ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಸೆರೆನಾ 2017ರ ಋತುವಿನ ಉಳಿದ ಸಮಯದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಮುಂದಿನ ವರ್ಷ ಟೆನಿಸ್ಗೆ ವಾಪಸಾಗಲಿದ್ದಾರೆ’’ಎಂದು ಲಾಸ್ ಏಂಜಲಿಸ್ ಮೂಲದ ಪ್ರಚಾರಕಿ ಕೆಲ್ಲಿ ಬುಶ್ ನೊವಾಕ್ ಹೇಳಿದ್ದಾರೆ.
ಸೆರೆನಾ ಈಗ 20 ವಾರ ಗರ್ಭಿಣಿಯಾಗಿದ್ದರೆ, ಅವರು ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ನಲ್ಲಿ ಸಿಂಗಲ್ಸ್ ಪ್ರಶಸ್ತಿ ಜಯಿಸುವಾಗ 2 ತಿಂಗಳ ಗರ್ಭಿಣಿಯಾಗಿರಬಹುದು. ಆಸ್ಟ್ರೇಲಿಯನ್ ಓಪನ್ ಜಯಿಸಿದ್ದ ಸೆರೆನಾ ಆಧುನಿಕ ಟೆನಿಸ್ನಲ್ಲಿ ಗರಿಷ್ಠ ಗ್ರಾನ್ಸ್ಲಾಮ್ ಪ್ರಶಸ್ತಿ ಪಡೆದ ಗೌರವಕ್ಕೆ ಪಾತ್ರರಾಗಿದ್ದರು. ಸ್ಟೆಫಿಗ್ರಾಫ್ ದಾಖಲೆಯನ್ನು ಮುರಿದಿದ್ದರು.
ವಿಶ್ವದ ಶ್ರೀಮಂತ ಮಹಿಳಾ ಅಥ್ಲೀಟ್ ಆಗಿರುವ ಸೆರೆನಾ ಕಳೆದ ವರ್ಷದ ಡಿಸೆಂಬರ್ನಲ್ಲಿ ರೆಡಿಟ್ ಸಹ ಸಂಸ್ಥಾಪಕ ಅಲೆಕ್ಸ್ ಒಹಾನಿಯನ್ರೊಂದಿಗೆ ಉಂಗುರ ಬದಲಾಯಿಸಿಕೊಂಡಿದ್ದರು.