ಅಪೂರ್ವ ಉಡುಗೊರೆ ನೀಡಿದ ಕೊಹ್ಲಿ ಪಡೆಗೆ ಅಫ್ರಿದಿ ಕೃತಜ್ಞತೆ
ಕರಾಚಿ, ಎ.21: ತನಗೆ ವಿಶೇಷ ವಿದಾಯದ ಉಡುಗೊರೆ ಕಳುಹಿಸಿಕೊಟ್ಟಿರುವ ವಿರಾಟ್ ಕೊಹ್ಲಿ ಹಾಗೂ ಟೀಮ್ ಇಂಡಿಯಾಕ್ಕೆ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ ಕೃತಜ್ಞತೆ ಸಲ್ಲಿಸಿದ್ದಾರೆ.
‘‘ನನಗೆ ಅದ್ಭುತ ಹಾಗೂ ಅಚ್ಚರಿಯ ವಿದಾಯದ ಉಡುಗೊರೆ ಕಳುಹಿಸಿಕೊಟ್ಟಿರುವ ಟೀಮ್ ಇಂಡಿಯಾದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವೆ’’ ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ.
ಕ್ರೀಡಾಸ್ಫೂರ್ತಿ ಪ್ರದರ್ಶಿಸಿದ್ದ ಟೀಮ್ ಇಂಡಿಯಾದ ಸದಸ್ಯರು ಇತ್ತೀಚೆಗೆ ಎಲ್ಲ ಆಟಗಾರರ ಹಸ್ತಾಕ್ಷರವಿರುವ ವಿರಾಟ್ ಕೊಹ್ಲಿಯ 18 ನಂಬರ್ನ ಜರ್ಸಿಯನ್ನು ಅಫ್ರಿದಿಗೆ ವಿದಾಯದ ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದರು. ಪಾಕಿಸ್ತಾನದ ಪತ್ರಕರ್ತ ಫೈಝಾನ್ ಲಖಾನಿ ವಿರಾಟ್ ಕೊಹ್ಲಿ ಬರಹವಿರುವ ಶರ್ಟ್ನ್ನು ಟ್ವಿಟರ್ನಲ್ಲಿ ಹಾಕಿದ್ದರು.
‘‘ಶಾಹಿದ್ ಭಾಯ್, ನಿಮಗೆ ಶುಭಾಶಯಗಳು, ನಿಮ್ಮಿಂದಿಗೆ ಆಡಲು ನನಗೆ ಯಾವಾಗಲೂ ಖುಷಿಯಾಗುತ್ತಿತ್ತು’’ ಎಂದು ಕೊಹ್ಲಿ ಬರೆದಿದ್ದರು.
37ರ ಹರೆಯದ ಅಫ್ರಿದಿ ಫೆಬ್ರವರಿಯಲ್ಲಿ ತನ್ನ 21 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು.