ಆಸ್ಟ್ರೇಲಿಯ ಕ್ರಿಕೆಟ್ನ ಮುಂದಿನ ಡಾನ್ ‘ಸರ್’ ವೋಗ್ಸ್ ....?
ವೆಲ್ಲಿಂಗ್ಟನ್, ಫೆ.13: ಇಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಆಸ್ಟ್ರೇಲಿಯದ ದಾಂಡಿಗ ಆ್ಯಡಮ್ ವೋಗ್ಸ್ ಶತಕ ದಾಖಸುವ ಮೂಲಕ ಅವರ ಟೆಸ್ಟ್ ರನ್ ಸರಾಸರಿ 100 ದಾಟಿತು. ಔಟಾಗದೆ ನಿರಂತರ 500 ರನ್ ಸಂಪಾದಿಸುವ ಮೂಲಕ ವಿಶ್ವ ಶ್ರೇಷ್ಠ ಬ್ಯಾಟ್ಸ್ಮನ್ಗಳಾದ ಸಚಿನ್ ತೆಂಡುಲ್ಕರ್ ಮತ್ತು ಡಾನ್ ಬ್ರಾಡ್ಮನ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಸಚಿನ್ ತೆಂಡುಲ್ಕರ್ 12 ವರ್ಷಗಳ ಹಿಂದೆ ನಿರಂತರ 497 ರನ್ ದಾಖಲಿಸಿದ್ದರು. ಈ ದಾಖಲೆಯನ್ನು ವೋಗ್ಸ್ ಮುರಿದು. ತನ್ನ ಹೆಸರಲ್ಲಿ ಹೊಸ ದಾಖಲೆ ನಿರ್ಮಿಸಿದರು.ವೋಗ್ಸ್ 123 ರನ್ ಗಳಿಸುತ್ತಿದ್ದಂತೆ ಔಟಾಗದೆ ಗರಿಷ್ಠ ರನ್ ದಾಖಲಿಸಿದ ಕ್ರಿಕಟಿಗನೆಂಬ ಗೌರವಕ್ಕೆ ಪಾತ್ರರಾದರು.
ಆಸ್ಟ್ರೇಲಿಯದ ದಂತಕತೆ ಸರ್ ಡಾನ್ ಬ್ರಾಡ್ಮನ್ ವಿಶ್ವದ ಸಾರ್ವಕಾಲಿಕ ಕ್ರಿಕೆಟಿಗನಾಗಿ ಗುರುತಿಸಲ್ಪಟ್ಟವರು. ಅವರು 1948ರಲ್ಲಿ ನಿವೃತ್ತಿಯ ಹೊತ್ತಿಗೆ 80 ಇನಿಂಗ್ಸ್ಗಳಲ್ಲಿ ಶೇ .99.94 ರನ್ ಸರಾಸರಿ ಹೊಂದಿದ್ದರು. ಇದೀಗ 19ನೆ ಇನಿಂಗ್ಸ್ನಲ್ಲಿ ಅವರ ಸಾಧನೆಯನ್ನು ವೋಗ್ಸ್ ಹಿಂದಿಕ್ಕಿದ್ದಾರೆ.
ವೋಗ್ಸ್ ಟೆಸ್ಟ್ನ ಎರಡನೆ ದಿನವಿಡೀ ಕ್ರೀಸ್ನಲ್ಲಿ ಬ್ಯಾಟ್ ಬೀಸಿದರು. ಅವರ ಶತಕದ ನೆರವಿನಲ್ಲಿ ಆಸ್ಟ್ರೇಲಿಯ ಮೊದಲ ಇನಿಂಗ್ಸ್ನಲ್ಲಿ 6 ವಿಕೆಟ್ ನಷ್ಟದಲ್ಲಿ 463 ರನ್ ಗಳಿಸಿದೆ. ನ್ಯೂಝಿಲೆಂಡ್ ವಿರುದ್ಧ 280 ರನ್ಗಳ ಮುನ್ನಡೆ ಸಾಧಿಸಿದೆ.
36ರ ಹರೆಯದ ವೋಗ್ಸ್ ತನ್ನ ರನ್ ಸರಾಸರಿಯನ್ನು 100.33ಕ್ಕೆ ಏರಿಸಿದ್ದಾರೆ. ಆಸ್ಟ್ರೇಲಿಯದ ನೂತನ ಡಾನ್ ಆಗಿ ಮೂಡಿ ಬಂದಿದ್ದಾರೆ.
ವೋಗ್ಸ್ ಮತ್ತು ಉಸ್ಮಾನ್ ಖ್ವಾಜಾ (140) ನಾಲ್ಕನೆ ವಿಕೆಟ್ಗೆ 168 ರನ್ಗಳ ಜೊತೆಯಾಟ ನೀಡಿದ್ದರು. ವೋಗ್ಸ್ ಕಳೆದ ಮೂರು ಇನಿಂಗ್ಸ್ಗಳಲ್ಲಿ ಶತಕ ದಾಖಲಿಸಿದ್ದಾರೆ. ಐದನೆ ಶತಕ ದಾಖಲಿಸಿರುವ ವೋಗ್ಸ್ ಕಳೆದ ಡಿಸೆಂಬರ್ನಲ್ಲಿ ವೆಸ್ಟ್ಇಂಡಿಸ್ ವಿರುದ್ಧ ಔಟಾಗದೆ 269 ರನ್ ಮತ್ತು 106 ರನ್ ಗಳಿಸಿದ್ದರು. ವೋಗ್ಸ್ 19 ಇನಿಂಗ್ಸ್ನಲ್ಲಿ 269 ಗರಿಷ್ಠ ವೈಯಕ್ತಿಕ ಸ್ಕೋರ್ ಔಟಾಗದೆ 269. ಐದು ಶತಕ ಮತ್ತು 3 ಅರ್ಧಶತಕ ದಾಖಲಿಸಿದ್ದಾರೆ. ಅವರ ಸ್ಟ್ರೈಕ್ ರೇಟ್59.36. ಉಸ್ಮಾನ್ ಖ್ವಾಜಾ 140 ರನ್ ಗಳಿಸಿ ಔಟಾಗಿದ್ದಾರೆ.397 ನಿಮಿಷಗಳ ಕಾಲ ಕ್ರೀಸ್ನಲ್ಲಿ ಬ್ಯಾಟಿಂಗ್ ನಡೆಸಿರುವ ವೋಗ್ಸ್ 286 ಎಸೆತಗಳನ್ನು ಎದುರಿಸಿ 26 ಬೌಂಡರಿಗಳ ನೆರವಿನಿಂದ 176 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ.ಇನ್ನೊಂದು ಶತಕ ಗಳಿಸುವ ಯೋಜನೆಯಲ್ಲಿದ್ದಾರೆ. ಅವರು ಕೊನೆಯ ಬಾರಿ ಔಟಾದ ಬಳಿಕ 551 ರನ್ ದಾಖಲಿಸಿದ್ದಾರೆ. ಹಿಂದೆ ಸಚಿನ್ ತೆಂಡುಲ್ಕರ್ 497 ರನ್ ಗಳಿಸಿ ಔಟಾಗಿದ್ದರು.
ವೋಗ್ಸ್ ಶುಕ್ರವಾರ ದಿನದ ಕೊನೆಯ ಓವರ್ನಲ್ಲಿ ಡಗ್ ಬ್ರಾಸ್ವೆಲ್ ಎಸೆತದಲ್ಲಿ ಜೀವದಾನ ಪಡೆದಿದ್ದರು. ಆಗ ಅವರ ಸ್ಕೋರ್ 7 ಆಗಿತ್ತು. ಅಂಪೈರ್ ನೋಬಾಲ್ ಎಂದು ಘೋಷಿಸಿದ ಕಾರಣದಿಂದಾಗಿ ವೋಗ್ಸ್ ಜೀವದಾನ ಪಡೆದಿದ್ದರು.
ಇವರ ನೆರವಿನಲ್ಲಿ ಆಸ್ಟ್ರೇಲಿಯ ಪಂದ್ಯದ ಎರಡನೆ ದಿನ ದಿನದಾಟದಂತ್ಯಕ್ಕೆ 130 ಓವರ್ಗಳಲ್ಲಿ 6 ವಿಕೆಟ್ಗೆ 463 ರನ್ ಮಾಡಿತ್ತು.ಮೊದಲ ದಿನ ಆಟ ನಿಂತಾಗ 40 ಓವರ್ಗಳಲ್ಲಿ 3 ವಿಕೆಟ್ಗೆ 147 ರನ್ ಗಳಿಸಿತ್ತು.
ಖ್ವಾಜಾ ಎರಡು ವರ್ಷಗಳ ಹಿಂದೆ ತಂಡಕ್ಕೆ ವಾಪಸಾದ ಬಳಿಕ ಅಪೂರ್ವ ಫಾರ್ಮ್ನಲ್ಲಿದ್ದಾರೆ. 51.05 ರನ್ ಸರಾಸರಿ ಹೊಂದಿದ್ದಾರೆ. ಅವರು 14 ಟೆಸ್ಟ್ಗಳಲ್ಲಿ 4ನೆ ಶತಕ ಪೂರ್ಣಗೊಳಿಸಿದ್ದಾರೆ.
‘‘ ವೋಗ್ಸ್ ರನ್ ಸರಾಸರಿಯಲ್ಲಿ ಬ್ರಾಡ್ಮನ್ ಅವರನ್ನು ಮೀರಿಸಿದಾಗ ಆ ಕ್ಷಣ ನಾನು ಅವರ ಬಳಿ ಹೋಗಿ ‘ಸರ್ ವೋಗ್ಸ್ ’ ಎಂದು ಕರೆದೆ ’’ಎಂದು ಉಸ್ಮಾನ್ ಖ್ವಾಜಾ ಹೇಳಿದ್ದಾರೆ.
ಸಂಕ್ಷಿಪ್ತ ಸ್ಕೋರ್ ವಿವರ
ನ್ಯೂಝಿಲೆಂಡ್ ಮೊದಲ ಇನಿಂಗ್ಸ್ 183
ಆಸ್ಟ್ರೇಲಿಯ ಮೊದಲ ಇನಿಂಗ್ಸ್ 130 ಓವರ್ಗಳಲ್ಲಿ 463/6( ವೋಗ್ಸ್ 176, ಖ್ವಾಜಾ 140; ಸೌಥಿ 76-2, ಬೌಲ್ಟ್ 2-80)