ಚೀನಾ 28ಕ್ಕೆ ಆಲೌಟ್ ; ಸೌದಿ ಅರೇಬಿಯಾಕ್ಕೆ 390 ರನ್ಗಳ ಭರ್ಜರಿ ಜಯ
ಚಿಯಾಂಗ್ ಮಾಯ್ , ಎ.23: ಇಲ್ಲಿ ನಡೆಯುತ್ತಿರುವ ಐಸಿಸಿ ವರ್ಲ್ಡ್ ಕ್ರಿಕೆಟ್ ಲೀಗ್ ಏಶ್ಯ ಡಿವಿಜನ್ ಒನ್ ಟೂರ್ನಿಯ ಪಂದ್ಯದಲ್ಲಿ ಶನಿವಾರ ಚೀನಾ ತಂಡ 28 ರನ್ಗಳಿಗೆ ಆಲೌಟಾಗಿದೆ. ಚೀನ ವಿರುದ್ಧ ಸೌದಿ ಅರೇಬಿಯಾ 390 ರನ್ಗಳ ಭರ್ಜರಿ ಜಯ ಗಳಿಸಿದೆ.
ಥಾಯ್ಲೆಂಡ್ನ ಜಿಮ್ಖಾನ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 419 ರನ್ಗಳ ಸವಾಲನ್ನು ಪಡೆದ ಚೀನಾ 12.4 ಓವರ್ಗಳಲ್ಲಿ 28 ರನ್ಗಳಿಗೆ ಆಲೌಟಾಗಿದೆ.
2004ರಲ್ಲಿ ಶ್ರೀಲಂಕಾ ವಿರುದ್ಧ ಝಿಂಬಾಬ್ವೆ ತಂಡ 35 ರನ್ ಗಳಿಸಿರುವುದು ಏಕದಿನ ಕ್ರಿಕೆಟ್ನಲ್ಲಿ ದಾಖಲಾಗಿದ್ದ ಕನಿಷ್ಠ ಸ್ಕೋರ್ ಆಗಿತ್ತು. ಈ
ಆಫ್ ಸ್ಪಿನ್ನರ್ ಶಾಹ್ಬಾಝ್ ರಶೀದ್ (5ಕ್ಕೆ 3)ಹ್ಯಾಟ್ರಿಕ್ ಗಳಿಸಿದರು. ರಶೀದ್ ,ಇಮ್ರಾನ್ ಆರಿಫ್(2ಕ್ಕೆ 3) ಮತ್ತು ಇಬ್ರಾವುಲ್ ಹಕ್(8ಕ್ಕೆ 3) ದಾಳಿಗೆ ಸಿಲುಕಿದ ಚೀನಾ ಹೀನಾಯ ಸೋಲು ಅನುಭವಿಸಿತು. ಚೀನ ತಂಡ ಗಳಿಸಿದ 28 ರನ್ ಮೊತ್ತದಲ್ಲಿ 13 ರನ್(ಲೆಗ್ಬೈ 7, ವೈಡ್ 6) ಇತರೆ ಆಗಿತ್ತು. ಆರಂಭಿಕ ದಾಂಡಿಗ ಝುವಾಂಗ್ ಝೆಲಿನ್(6) ಮತ್ತು ಝಾಂಗ್ ಪೆಂಗ್(ಔಟಾಗದೆ 6) ಗಳಿಸಿರುವುದು ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಇವರು ತಲಾ 1 ಬೌಂಡರಿ ಬಾರಿಸಿದ್ದರು. ಇವರನ್ನು ಹೊರತುಪಡಿಸಿದರೆ ಕಾಂಗ್ಕಾಂಗ್ 3 ರನ್ ಗಳಿಸಿದರು. ತಂಡದ ಏಳು ಆಟಗಾರರು ಸೊನ್ನೆ ಸುತ್ತಿದರು. ಜಿಯಾಂಗ್ ಶುಯಾವು ಗಾಯಗೊಂಡ ಕಾರಣದಿಂದಾಗಿ ಆಡಲಿಲ್ಲ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಸೌದಿ ಅರೇಬಿಯಾ ತಂಡಕ್ಕೆ ಮುಹಮ್ಮದ್ ಅಫ್ಝಲ್ (120), ನಾಯಕ ಶುಐಬ್ ಅಲಿ(91), ಶಾಹ್ಬಾಝ್ ರಶೀದ್(51), ಅಬ್ದುಲ್ ವಹೀದ್(30), ಇಮ್ರಾನ್ ಆರೀಫ್(40), ಹಮೀದ್ ಸಯೀದ್(19), ಇಬ್ರಾಯುಲ್ ಹಕ್(28) ಉತ್ತಮ ನೆರವು ನೀಡಿ ತಂಡದ ಸ್ಕೋರ್ನ್ನು ನಾನೂರು ರನ್ಗಳ ಗಡಿ ದಾಟಿಸಲು ನೆರವಾಗಿದ್ದರು.
ಚೀನಾ ತಂಡದ ಫೆಂಗ್ ಯು 89ಕ್ಕೆ 5 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು.ಈ ಟೂರ್ನಮೆಂಟ್ನಲ್ಲಿ ಥಾಯ್ಲೆಂಡ್, ಬಹರೈನ್, ಭೂತಾನ್, ಕುವೈಟ್, ಕತರ್ ದೇಶಗಳ ತಂಡಗಳು ಪಾಲ್ಗೊಂಡಿವೆ.