ಇಟಾಲಿಯನ್ ಓಪನ್: ಸಾನಿಯಾ ಜೋಡಿ ಸೆಮಿ ಫೈನಲ್ಗೆ
ರೋಮ್(ಇಟಲಿ), ಮೇ 20: ಟೆನಿಸ್ ತಾರೆ ಸಾನಿಯಾ ಮಿರ್ಝಾ ಕಝಕ್ಸ್ತಾನದ ಯರೊಸ್ಲೊವಾ ಶ್ವೆಡೋವಾ ಜೊತೆಗೂಡಿ ಇಟಾಲಿಯನ್ ಓಪನ್ನ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸೆಮಿ ಫೈನಲ್ಗೆ ಪ್ರವೇಶಿಸಿದ್ದಾರೆ.
ಇಲ್ಲಿ ಶುಕ್ರವಾರ ಒಂದು ಗಂಟೆ, 8 ನಿಮಿಷಗಳ ಕಾಲ ಏಕಪಕ್ಷೀಯವಾಗಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೂರನೆ ಶ್ರೇಯಾಂಕದ ಸಾನಿಯಾ-ಶ್ವೆಡೋವಾ ಜೋಡಿ ಇಟಲಿಯ ಮಾರ್ಟಿನಾ ಟ್ರೆವಿಸನ್ ಹಾಗೂ ಸಾರಾ ಇರಾನಿ ಅವರನ್ನು 6-4, 6-1 ಸೆಟ್ಗಳ ಅಂತರದಿಂದ ಸೋಲಿಸಿತು.
ಸಾನಿಯಾ-ಶ್ವೆಡೋವಾ ಸೆಮಿಫೈನಲ್ ಸುತ್ತಿನಲ್ಲಿ ತೈವಾನ್-ಸ್ಲೋವಾಕಿಯದ ಚಾನ್ ಯಂಗ್-ಜಾಂಗ್ ಹಾಗೂ ಮಾರ್ಟಿನಾ ಹಿಂಗಿಸ್ರನ್ನು ಎದುರಿಸಲಿದ್ದಾರೆ.
ಬೋಪಣ್ಣ ಜೋಡಿಗೆ ಸೋಲು: ಪುರುಷರ ಡಬಲ್ಸ್ ಪಂದ್ಯದಲ್ಲಿ ಭಾರತದ ಟೆನಿಸ್ ತಾರೆ ರೋಹನ್ ಬೋಪಣ್ಣ ಹಾಗೂ ಉರುಗ್ವೆಯ ಪಾಬ್ಲೊ ಕ್ಯುವಾಸ್ ಅವರು ಹೆರ್ಬರ್ಟ್ ಹಾಗೂ ಮಹೂಟ್ ವಿರುದ್ಧ 6-7(5/7), 7-6(7-2), 10-12 ಸೆಟ್ಗಳ ಅಂತರದಿಂದ ಶರಣಾಗಿದೆ.
ಕಳೆದ ತಿಂಗಳು ಸ್ಪೇನ್ನ ಲೊಪೆಝ್ ಸಹೋದರರನ್ನು ಮಣಿಸಿದ್ದ ಬೋಪಣ್ಣ ಹಾಗೂ ಕ್ಯುವಾಸ್ ಜೋಡಿ ಮಾಂಟೆ ಕಾರ್ಲೊ ಮಾಸ್ಟರ್ಸ್ ಪ್ರಶಸ್ತಿಯನ್ನು ಜಯಿಸಿತ್ತು.