ಇಂಗ್ಲೆಂಡ್ ಗೆ ಹ್ಯಾಟ್ರಿಕ್ ಗೆಲುವು ; ಆಸ್ಟ್ರೇಲಿಯ ಹೊರಕ್ಕೆ
ಬೆನ್ ಸ್ಟೋಕ್ಸ್ ಶತಕ, ಮೊರ್ಗನ್ ಅರ್ಧಶತಕ
ಬರ್ಮಿಂಗ್ಹ್ಯಾಮ್,ಜೂ.10: ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ನ ‘ಎ’ ಗುಂಪಿನ ಪಂದ್ಯದಲ್ಲಿ ಇಂದು ಆಸ್ಟ್ರೇಲಿಯ ವಿರುದ್ಧ ಇಂಗ್ಲೆಂಡ್ 40ರನ್ಗಳ ಜಯ ಗಳಿಸಿದ್ದು, ‘ಎ’ ಗುಂಪಿನಲ್ಲಿ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದೆ
‘ಎ’ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ನ್ಯೂಝಿಲೆಂಡ್ ವಿರುದ್ಧ ಜಯ ಗಳಿಸಿದ್ದ ಇಂಗ್ಲೆಂಡ್ ಸೆಮಿಫೈನಲ್ನಲ್ಲಿ ಅವಕಾಶ ದೃಢಪಡಿಸಿತ್ತು. ಇಂಗ್ಲೆಂಡ್ ಶನಿವಾರ ಮಳೆ ಬಾಧಿತ ಪಂದ್ಯದಲ್ಲಿ ಡಕ್ವರ್ತ್ ಲೂವಿಸ್ ನಿಯಮದಂತೆ ಆಸ್ಟ್ರೇಲಿಯದ ವಿರುದ್ಧ ಸುಲಭದ ಜಯ ದಾಖಲಿಸಿದೆ
ಇಂಗ್ಲೆಂಡ್ ತಂಡ ಈ ಗೆಲುವಿನೊಂದಿಗೆ ವಿಶ್ವ ಚಾಂಪಿಯನ್ ಆಸ್ಟ್ರೇಲಿಯದ ಸೆಮಿಫೈನಲ್ ಹಾದಿಯನ್ನು ಬಂದ್ ಮಾಡಿದೆ. ಆಸ್ಟ್ರೇಲಿಯ ಎದುರಿಸಿದ್ದ ಎರಡೂ ಪಂದ್ಯಗಳು ಮಳೆಯಿಂದಾಗಿ ಕೊಚ್ಚಿ ಹೋಗಿತ್ತು. ಆದರೆ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲ್ಲುವ ಆಸ್ಟ್ರೇಲಿಯದ ಕನಸು ಈಡೆರಲಿಲ್ಲ.
ಗೆಲುವಿಗೆ 278 ರನ್ಗಳ ಗೆಲುವಿನ ಸವಾಲನ್ನು ಪಡೆದೆ ಇಂಗ್ಲೆಂಡ್ಗೆ ಆಟಕ್ಕೆ ಮಳೆ ಅಡ್ಡಿಪಡಿಸಿದ್ದರೂ ಬೆನ್ ಸ್ಟೋಕ್ಸ್ ಶತಕ ಮತ್ತು ನಾಯಕ ಇಯಾನ್ ಮೊರ್ಗನ್ ಅರ್ಧಶತಕ ಕೊಡುಗೆ ಇಂಗ್ಲೆಂಡ್ನ್ನು ಗೆಲುವಿನ ದಡ ಸೇರಿಸಿತು.
ಬೆನ್ ಸ್ಟೋಕ್ಸ್ ಔಟಾಗದೆ 102 ರನ್(109ಎ, 13ಬೌ,2ಸಿ) ಮತ್ತು ಇಯಾನ್ ಮೊರ್ಗನ್ 87 ರನ್(81ಎ, 8ಬೌ,5ಸಿ) ಕೊಡುಗೆ ನೀಡಿದರು.
ಒಂದು ಹಂತದಲ್ಲಿ ಮಳೆಯಿಂದಾಗಿ ಆಟ ನಿಂತಾಗ ಇಂಗ್ಲೆಂಡ್ 6 ಓವರ್ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 35 ರನ್ ಗಳಿಸಿತ್ತು. ಬಳಿಕ ಆಟ ಆರಂಭಗೊಂಡಾಗ ಮೊರ್ಗನ್ ಮತ್ತು ಸ್ಟೋಕ್ಸ್ ತಂಡಕ್ಕೆ ನೆರವು ನೀಡಿದರು. ಇವರು 4ನೆ ವಿಕೆಟ್ಗೆ 159 ರನ್ಗಳ ಕೊಡುಗೆ ನೀಡುವ ಮೂಲಕ ಇಂಗ್ಲೆಂಡ್ನ ಗೆಲುವಿಗೆ ನೆರವಾದರು.
ಆಸ್ಟ್ರೇಲಿಯದ ಹೇಝಲ್ವುಡ್ (50ಕ್ಕೆ 2) ಮತ್ತು ಮಿಚೆಲ್ ಸ್ಟಾರ್ಕ್(52ಕ್ಕೆ)1 ದಾಳಿಗೆ ಸಿಲುಕಿದ ಇಂಗ್ಲೆಂಡ್ನ ಅಗ್ರ ಸರದಿಯ ದಾಂಡಿಗರು ಕಳಪೆ ಪ್ರದರ್ಶನ ನೀಡಿ ಬೇಗನೆ ಪೆವಿಲಿಯನ್ ಸೇರಿದ್ದರು.
ಸ್ಟಾರ್ಕ್ ಅವರ ಮೊದಲ ಓವರ್ನ ಮೊದಲ ಎಸೆವನ್ನು ಜೇಸನ್ ರಾಯ್ ಬೌಂಡರಿಗಟ್ಟಿದರು. ಆದರೆ ಎರಡನೆ ಎಸೆತದಲ್ಲಿ ಚೆಂಡನ್ನು ಎದುರಿಸಲು ಹೋಗಿ ಎಲ್ಬಿಡಬ್ಲು ಬಲೆಗೆ ಬಿದ್ದು ಪೆವಿಲಿಯನ್ ಸೇರಿದರು.ಎರಡನೆ ಓವರ್ನಲ್ಲಿ ಹೇಲ್ಸ್ (0) ಖಾತೆ ತೆರೆಯದೆ ಹೇಝಲ್ವುಡ್ಗೆ ವಿಕೆಟ್ ಒಪ್ಪಿಸಿದರು.
6 ಓವರ್ನಲ್ಲಿ ರೂಟ್ (15) ಅವರು ಹೇಝಲ್ವುಡ್ ಎಸೆತದಲ್ಲಿ ಮ್ಯಾಥ್ಯೂ ವೇಡ್ಗೆ ಕ್ಯಾಚ್ ನೀಡಿದರು. ಬಳಿಕ ನಾಯಕ ಇಯಾನ್ ಮೊರ್ಗನ್ ಮತ್ತು ಬೆನ್ ಸ್ಟೋಕ್ಸ್ ಜೊತೆಯಾಗಿ ಇಂಗ್ಲೆಂಡ್ನ ಬ್ಯಾಟಿಂಗ್ನ್ನು ಮುನ್ನಡೆಸುವ ಹೊತ್ತಿಗೆ ಮಳೆ ಅವರ ಬ್ಯಾಟಿಂಗ್ಗೆ ಅಡ್ಡಿಪಡಿಸಿ ಆಟ ಸ್ಥಗಿತಗೊಂಡಿತ್ತು. ಇಂಗ್ಲೆಂಡ್ 6 ಓವರ್ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 35 ರನ್ ಗಳಿಸುವ ಹೊತ್ತಿಗೆ ಮಳೆ ಆಗಮನವಾಯಿತು. ಆಗ ಮೊರ್ಗನ್ 14 ರನ್ ಗಳಿಸಿದ್ದರು. ಸ್ಟೋಕ್ಸ್ ಖಾತೆ ತೆರೆ ದಿರಲಿಲ್ಲ. ಬಳಿಕ ಮಳೆ ನಿಂತಾಗ ಆಟ ಮುಂದುವರಿಸಿದ ಮೊರ್ಗನ್ ಮತ್ತು ಸ್ಟೋಕ್ಸ್ ತಂಡವನ್ನು ಆಧರಿಸಿದರು. ಸ್ಟೋಕ್ಸ್ 2ನೆ ಶತಕ ದಾಖಲಿಸಿದರು. ಆದರೆ ನಾಯಕ ಮೊರ್ಗನ್ ಶತಕ ವಂಚಿತಗೊಂಡರು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 50 ಓವರ್ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 277 ರನ್ ಗಳಿಸಿತ್ತು.
ಆ್ಯರೊನ್ ಫಿಂಚ್(68), ನಾಯಕ ಸ್ಟೀವ್ ಸ್ಮಿತ್(56) ಮತ್ತು ಟ್ರಾವಿಸ್ ಹೆಡ್(ಔಟಾಗದೆ 71) ಅರ್ಧಶತಕಗಳ ನೆರವಿನಲ್ಲಿ ಆಸ್ಟ್ರೇಲಿಯ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು.