ಹಾಲೆಂಡ್ಗೆ ಶರಣಾದ ಭಾರತ: ಕ್ವಾರ್ಟರ್ ಫೈನಲ್ನಲ್ಲಿ ಮಲೇಷ್ಯಾ ಎದುರಾಳಿ
ಲಂಡನ್, ಜೂ.20: ಹಾಕಿ ವರ್ಲ್ಡ್ ಲೀಗ್ ಸೆಮಿಫೈನಲ್ಸ್ ಟೂರ್ನಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡ ಗರಿಷ್ಠ ರ್ಯಾಂಕಿನ ಹಾಲೆಂಡ್ ವಿರುದ್ಧ 1-3 ಗೋಲುಗಳ ಅಂತರದಿಂದ ಶರಣಾಗಿದೆ.
ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಥಿಯೆರಿ ಬ್ರಿಂಕ್ಮನ್(2ನೆ ನಿಮಿಷ), ಸ್ಯಾಂಡರ್ ಬಾರ್ಟ್(12ನೆ) ಹಾಗೂ ಮೈಕ್ರೊ ಪ್ರುಜ್ಸೆರ್(24ನೆ ನಿಮಿಷ) ತಲಾ ಒಂದು ಗೋಲು ಬಾರಿಸಿದರು. ಭಾರತದ ಪರ ಆಕಾಶ್ದೀಪ್ ಸಿಂಗ್ ಏಕೈಕ ಗೋಲು ಬಾರಿಸಿದ್ದಾರೆ.
ಭಾರತ ತಂಡ ಹಾಲೆಂಡ್ಗೆ ಸೋತಿದ್ದರೂ ಟೂರ್ನಿಯಲ್ಲಿನ ಅವಕಾಶಕ್ಕೆ ಯಾವುದೇ ಪರಿಣಾಮವಾಗಿಲ್ಲ. ಟೂರ್ನಿಯಲ್ಲಿ ಮೊದಲ ಮೂರು ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ ಈಗಾಗಲೇ ಕ್ವಾರ್ಟರ್ ಫೈನಲ್ಗೆ ತೇರ್ಗಡೆಯಾಗಿದೆ. ಗುರುವಾರ ನಡೆಯಲಿರುವ ಕ್ವಾರ್ಟರ್ ಫೈನಲ್ನಲ್ಲಿ ಮಲೇಷ್ಯಾವನ್ನು ಎದುರಿಸಲಿದೆ.
ಬಿ ಗುಂಪಿನಲ್ಲಿ ಎಲ್ಲ ನಾಲ್ಕೂ ಪಂದ್ಯಗಳನ್ನು ಗೆದ್ದುಕೊಂಡಿರುವ ಹಾಲೆಂಡ್ ತಂಡ ಮೊದಲ ಸ್ಥಾನವನ್ನು ಪಡೆದಿದ್ದು, 4 ಪಂದ್ಯಗಳಲ್ಲಿ 3ರಲ್ಲಿ ಜಯ ಸಾಧಿಸಿರುವ ಭಾರತ ಎರಡನೆ ಸ್ಥಾನದಲ್ಲಿದೆ.
ಹಾಲೆಂಡ್ ತಂಡ ಗುರುವಾರ ನಡೆಯಲಿರುವ ಮತ್ತೊಂದು ಕ್ವಾರ್ಟರ್ ಫೈನಲ್ನಲ್ಲಿ ಚೀನಾ ತಂಡವನ್ನು ಎದುರಿಸಲಿದೆ.
ನಾಲ್ಕನೆ ರ್ಯಾಂಕಿನಲ್ಲಿರುವ ಹಾಲೆಂಡ್ ಆರನೆ ರ್ಯಾಂಕಿನ ಭಾರತ ವಿರುದ್ಧ ಫೇವರಿಟ್ ತಂಡವಾಗಿ ಹೊರಹೊಮ್ಮಿತ್ತು. ಡಚ್ಚರು ನಿರೀಕ್ಷೆಯಂತೆಯೇ ಉತ್ತಮ ಪ್ರದರ್ಶನ ನೀಡಿ ಪಂದ್ಯದುದ್ದಕ್ಕೂ ಬಿಗಿ ಹಿಡಿತ ಸಾಧಿಸಿತು.
ಆಟ ಆರಂಭವಾಗಿ ಎರಡೇ ನಿಮಿಷದಲ್ಲಿ ಹಾಲೆಂಡ್ 1-0 ಮುನ್ನಡೆ ಸಾಧಿಸಿತ್ತು. ಆರನೆ ನಿಮಿಷದಲ್ಲಿ ಯುವ ಆಟಗಾರ ಆಕಾಶ್ ಎದುರಾಳಿಗೆ ಗೋಲು ನಿರಾಕರಿಸಿದರು. ಆದರೆ, ಹಾಲೆಂಡ್ 12ನೆ ನಿಮಿಷದಲ್ಲಿ ಮುನ್ನಡೆಯನ್ನು 2-0ಗೇರಿಸಿತು. ಸತತ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿದ್ದ ಹಾಲೆಂಡ್ ಗೋಲು ಬಾರಿಸಲು ವಿಫಲವಾಗಿತ್ತು. ಆದರೆ, 24ನೆ ನಿಮಿಷದಲ್ಲಿ ಮೂರನೆ ಗೋಲು ಬಾರಿಸಿದ ಮೈಕ್ರೊ ತಂಡಕ್ಕೆ 3-0 ಮುನ್ನಡೆ ಒದಗಿಸಿಕೊಟ್ಟರು.