ಅನಿಲ್ ಕುಂಬ್ಳೆ ಉತ್ತರಾಧಿಕಾರಿ ಯಾರು?
ಸ್ಪರ್ಧಾ ಕಣದಲ್ಲಿ ಐವರು ಅಭ್ಯರ್ಥಿಗಳು
ಹೊಸದಿಲ್ಲಿ, ಜೂ.21: ಅನಿಲ್ ಕುಂಬ್ಳೆ ಟೀಮ್ ಇಂಡಿಯಾದ ಮುಖ್ಯಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕುಂಬ್ಳೆಯಿಂದ ತೆರವಾಗಿರುವ ಸ್ಥಾನ ಯಾರು ತುಂಬಲಿದ್ದಾರೆಂಬ ಪ್ರಶ್ನೆ ಕಾಡಲಾರಂಭಿಸಿದೆ. ಬಿಸಿಸಿಐ ಒಂದು ತಿಂಗಳ ಹಿಂದೆಯೇ ನೂತನ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ ಹಾಗೂ ರಿಚರ್ಡ್ ಪೈಬಸ್ ಸಹಿತ ಐವರು ಅಭ್ಯರ್ಥಿಗಳು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.
1.ವೀರೇಂದ್ರ ಸೆಹ್ವಾಗ್: ಭಾರತದ ಮುಖ್ಯ ಕೋಚ್ ಹುದ್ದೆ ಗಿಟ್ಟಿಸಿಕೊಳ್ಳಲು ಮುಂಚೂಣಿಯಲ್ಲಿರುವ ಅಭ್ಯರ್ಥಿಗಳ ಪೈಕಿ ಓರ್ವರಾಗಿರುವ ಸೆಹ್ವಾಗ್ ಬಿಸಿಸಿಐನ ಬಲವಂತಕ್ಕೆ ಮಣಿದು ಅರ್ಜಿ ಸಲ್ಲಿಸಿದ್ದಾರೆಂಬ ಮಾತು ಕೇಳಿಬರುತ್ತಿದೆ.
ವೀಕ್ಷಕವಿವರಣೆಗಾರನಾಗಿರುವ ಸೆಹ್ವಾಗ್ ನಿವೃತ್ತಿಯ ಬಳಿಕ ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಲಹೆಗಾರನಾಗಿದ್ದರು. ಈ ವರ್ಷ ತಂಡದ ಮುಖ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಸೆಹ್ವಾಗ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಆದರೆ, ಅವರಲ್ಲಿ ಕೋಚಿಂಗ್ ಅನುಭವದ ಕೊರತೆಯಿದೆ. ತಾರತಮ್ಯದ ಅಭಿಪ್ರಾಯಗಳು, ದುಗುಡುತನ ಸ್ವಭಾವ ತಂಡದ ಶಿಸ್ತಿಗೆ ಧಕ್ಕೆಯಾಗುವ ಸಾಧ್ಯತೆಯಿದೆ.
2. ಟಾಮ್ ಮೂಡಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಕೋಚ್ ಆಗಿ ಹೆಸರು ಗಳಿಸಿರುವ ಆಸ್ಟ್ರೇಲಿಯದ ಟಾಮ್ ಮೂಡಿ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಈ ವರ್ಷದ ಟೂರ್ನಿಯಲ್ಲಿ ಹೈದರಾಬಾದ್ ಎಲಿಮಿನೇಟರ್ ಸುತ್ತಿನಲ್ಲಿ ನಿರ್ಗಮಿಸಿದ್ದರೂ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಮೂಡಿ ಮಾರ್ಗದರ್ಶನದಲ್ಲಿ ಹೈದರಾಬಾದ್ 2016ರಲ್ಲಿ ಐಪಿಎಲ್ ಚಾಂಪಿಯನ್ ಆಗಿತ್ತು. 2007ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ನಲ್ಲಿ ಶ್ರೀಲಂಕಾ ತಂಡ ಫೈನಲ್ಗೆ ತಲುಪಲು ಮೂಡಿ ನೆರವಾಗಿದ್ದರು.
ಇತ್ತೀಚೆಗೆ ಮೂಡಿ ಗಳಿಸಿರುವ ಯಶಸ್ಸು, ಕೋಚ್ ಆಗಿ ಅವರಿಗಿರುವ ಅನುಭವವು ಕುಂಬ್ಳೆಯಿಂದ ತೆರವಾಗಿರುವ ಮುಖ್ಯ ಕೋಚ್ ಹುದ್ದೆ ತುಂಬಲು ಪೂರಕವಾಗಿದೆ. ಕಳೆದ 17 ವರ್ಷಗಳಲ್ಲಿ 15 ವರ್ಷಗಳ ಕಾಲ ವಿದೇಶಿ ಕೋಚ್ಗಳೇ ಭಾರತಕ್ಕೆ ಕೋಚಿಂಗ್ ನೀಡಿದ್ದಾರೆ. ಜಾನ್ ರೈಟ್, ಗ್ಯಾರಿ ಕರ್ಸ್ಟನ್ ಹಾಗೂ ಡಂಕನ್ ಫ್ಲೆಚರ್ ಭಾರತ ಕ್ರಿಕೆಟ್ ತಂಡಕ್ಕೆ ದೀರ್ಘಕಾಲ ಕೋಚ್ ಆಗಿದ್ದರು. ಇತ್ತೀಚೆಗಷ್ಟೇ ಭಾರತದವರೇ ಕೋಚ್ ಆಗುವ ಟ್ರೆಂಡ್ ಆರಂಭವಾಗಿದ್ದು, ರವಿ ಶಾಸ್ತ್ರಿ, ಕುಂಬ್ಳೆ ಹಾಗೂ ಸಂಜಯ್ ಬಂಗಾರ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.
3. ರಿಚರ್ಡ್ ಪೈಬಸ್: ಪೈಬಸ್ ಕೇವಲ ಒಂದು ಲೀಸ್ಟ್ 'ಎ' ಪಂದ್ಯವನ್ನು ಆಡಿದ್ದರೂ ಕೋಚಿಂಗ್ ವೃತ್ತಿಯಲ್ಲಿ ಸಾಕಷ್ಟು ಯಶಸ್ಸು ಗಳಿಸಿದ್ದಾರೆ. 1999ರಲ್ಲಿ ಪಾಕಿಸ್ತಾನ ತಂಡ ವಿಶ್ವಕಪ್ ಫೈನಲ್ಗೆ ತಲುಪಲು ಮಾರ್ಗದರ್ಶನ ನೀಡಿದ್ದರು. ಇಂಗ್ಲೆಂಡ್ನ ಪೈಬಸ್ಗೆ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಕ್ಕೆ ಕೋಚ್ ನೀಡಿರುವ ಅನುಭವವಿದೆ. ಉಪ-ಖಂಡದಲ್ಲಿ ಅಪಾರ ಅನುಭವ ಗಳಿಸಿದ್ದಾರೆ.
ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ಕೌಂಟಿ ತಂಡದಲ್ಲಿ ಐದು ತಿಂಗಳ ಕಾಲ ಕೋಚ್ ಆಗಿದ್ದ ಪೈಬಸ್ ಭಾರತ ತಂಡದಲ್ಲಿ 2019ರ ವಿಶ್ವಕಪ್ ತನಕ ಕೋಚ್ ಆಗಿ ಇರಬಹುದೇ? ಎಂಬ ಪ್ರಶ್ನೆ ಉದ್ಬವಿಸಿದೆ.
4.ಲಾಲ್ಚಂದ್ ರಾಜ್ಪೂತ್: ಕಳೆದ ವರ್ಷ ಭಾರತದ ಕೋಚ್ ಆಯ್ಕೆ ವೇಳೆ ರಾಜ್ಪೂತ್ ಹೆಸರು ಬಲವಾಗಿ ಕೇಳಿಬಂದಿತ್ತು. ರಾಜ್ಪೂತ್ಗೆ ಭಾರತದ ಅಂಡರ್-19 ಹಾಗೂ ಭಾರತ 'ಎ' ತಂಡಗಳಿಗೆ ಕೋಚ್ ನೀಡಿರುವ ಅಪಾರ ಅನುಭವವಿದೆ.
ಅಫ್ಘಾನಿಸ್ತಾನ ತಂಡದ ಕೋಚ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸಿನ ಸವಿ ಉಂಡಿದ್ದ ರಾಜ್ಪೂತ್ ಬಲಿಷ್ಠ ಕ್ರಿಕೆಟ್ ತಂಡಕ್ಕೆ ಕೋಚ್ ನೀಡಿರುವ ಅನುಭವಯಿಲ್ಲದಿರುವುದು ಮೈನಸ್ ಪಾಯಿಂಟ್.
5. ದೊಡ್ಡ ಗಣೇಶ್: ಭಾರತದ ಪರ ಕೇವಲ ನಾಲ್ಕು ಟೆಸ್ಟ್ ಹಾಗೂ ಏಕದಿನ ಪಂದ್ಯಗಳನ್ನಾಡಿರುವ ದೊಡ್ಡ ಗಣೇಶ್ ಭಾರತದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ. ಕನ್ನಡಿಗ ಗಣೇಶ್ಗೆ 2012 ರಿಂದ 2016ರ ತನಕ ಗೋವಾ ರಣಜಿ ತಂಡಕ್ಕೆ ಕೋಚ್ ನೀಡಿರುವ ಅನುಭವವಿದೆ.
ಗೋವಾ ಹಾಗೂ ಜೂನಿಯರ್ ತಂಡಗಳಿಗೆ ಕೋಚ್ ನೀಡಿದ್ದಲ್ಲದೆ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಗಣೇಶ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೋಚ್ ನೀಡಿದ ಅನುಭವವಿಲ್ಲ. ಆಟಗಾರರೊಂದಿಗೆ ಹೊಂದಿಕೊಂಡು ಹೋಗುವ ಗುಣವಿಲ್ಲದಿರುವುದು ಮೈನಸ್ ಪಾಯಿಂಟ್ ಆಗಿದೆ.