ಟೆಸ್ಟ್ ಕ್ರಿಕೆಟ್ಗೆ ಹಾರ್ದಿಕ್ ಪಾಂಡ್ಯ ಪಾದಾರ್ಪಣೆ
ಗಾಲೆ, ಜು.26: ಸುಮಾರು ಒಂದೂವರೆ ವರ್ಷಗಳ ಹಿಂದೆ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಿರುವ ಗುಜರಾತ್ನ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಶ್ರೀಲಂಕಾ ವಿರುದ್ಧ ಬುಧವಾರ ಇಲ್ಲಿ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆಗೈದರು.
ಈಗಾಗಲೇ ಟ್ವೆಂಟಿ-20 ಹಾಗೂ ಏಕದಿನ ಪಂದ್ಯವನ್ನಾಡುವ ಅವಕಾಶ ಪಡೆದಿರುವ ಪಾಂಡ್ಯ ಬುಧವಾರ ಟೆಸ್ಟ್ ಕ್ರಿಕೆಟ್ನಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. 2016ರ ಜನವರಿಯಲ್ಲಿ ಅಡಿಲೇಡ್ನಲ್ಲಿ ಆಸ್ಟ್ರೇಲಿಯ ವಿರುದ್ಧ ಮೊದಲ ಟ್ವೆಂಟಿ-20 ಪಂದ್ಯವನ್ನಾಡಿದ್ದ ಪಾಂಡ್ಯ ಕಳೆದ ವರ್ಷದ ಅಕ್ಟೋಬರ್ನಲ್ಲಿ ಧರ್ಮಶಾಲಾದಲ್ಲಿ ನ್ಯೂಝಿಲೆಂಡ್ನ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದರು.
17 ಏಕದಿನ ಹಾಗೂ 15 ಟ್ವೆಂಟಿ-20 ಪಂದ್ಯಗಳಲ್ಲಿ ಕ್ರಮವಾಗಿ 19 ಹಾಗೂ 17 ವಿಕೆಟ್ಗಳನ್ನು ಪಡೆದಿದ್ದಾರೆ. ಏಕದಿನದಲ್ಲಿ 41.28ರ ಸರಾಸರಿಯಲ್ಲಿ 241 ರನ್ ಕಲೆ ಹಾಕಿರುವ ಪಾಂಡ್ಯ ಟ್ವೆಂಟಿ-20 ಕ್ರಿಕೆಟ್ನಲ್ಲಿ ಒಟ್ಟು 100 ರನ್ ಗಳಿಸಿದ್ದಾರೆ.
Next Story