ಮಹಿಳೆಯರ 400 ಮೀ. ಓಟ: ನಿರ್ಮಲಾ ಸೆಮಿ ಫೈನಲ್ಗೆ
ಲಂಡನ್, ಆ.6:ಭಾರತದ ಓಟಗಾರ್ತಿ ನಿರ್ಮಲಾ ಶೆರೊನ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಮಹಿಳೆಯರ 400 ಮೀ. ಓಟದಲ್ಲಿ ಸೆಮಿ ಫೈನಲ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಪುರುಷರ ಮ್ಯಾರಥಾನ್ನಲ್ಲಿ ಟಿ.ಗೋಪಿ 28ನೆ ಸ್ಥಾನ ಪಡೆದು ನಿರಾಸೆಗೊಳಿಸಿದರು. ಸಿದ್ಧಾರ್ಥ್ ತಿಂಗಳಾಯ ಪುರುಷರ 110 ಮೀ. ಹರ್ಡಲ್ಸ್ನ ಹೀಟ್ಸ್ನಲ್ಲಿ ಏಳನೆ ಸ್ಥಾನ ಪಡೆದು ಸ್ಪರ್ಧೆಯಿಂದ ಹೊರ ನಡೆದರು. ಸ್ಪರ್ಧೆಯಲ್ಲಿದ್ದ 39 ಅಥ್ಲೀಟ್ಗಳ ಪೈಕಿ 31ನೆ ಸ್ಥಾನ ಪಡೆದರು. ‘‘ನನ್ನ ಪ್ರಕಾರ ಇದು ಉತ್ತಮ ರೇಸ್ ಆಗಿತ್ತು. ಆದರೆ, ಸೆಮಿಫೈನಲ್ ಸ್ಥಾನ ಪಡೆಯುವುದಕ್ಕೆ ಇದು ಸಾಕಾಗದು. ಟೈಮಿಂಗ್ ಬಗ್ಗೆ ನನಗೆ ನಿರಾಶೆಯಾಗಿಲ್ಲ’’ ಎಂದು ರೇಸ್ ಬಳಿಕ ತಿಂಗಳಾಯ ಪ್ರತಿಕ್ರಿಯಿಸಿದರು.
22ರ ಹರೆಯದ ನಿರ್ಮಲಾ ಮಹಿಳೆಯರ 400 ಮೀ. ಓಟದ ಮೊದಲ ಸುತ್ತಿನ ಹೀಟ್ನಲ್ಲಿ 52.01 ಸೆಕೆಂಡ್ನಲ್ಲಿ ಗುರಿ ತಲುಪಿ ನಾಲ್ಕನೆ ಸ್ಥಾನ ಪಡೆದು ಸೆಮಿಫೈನಲ್ಗೆ ಅರ್ಹತೆ ಪಡೆದರು.
ಹರ್ಯಾಣದ ಓಟಗಾರ್ತಿ ಸೋಮವಾರ ನಡೆಯಲಿರುವ ಸೆಮಿ ಫೈನಲ್ನಲ್ಲಿ ಜಯ ಸಾಧಿಸಬೇಕಾದರೆ ವೈಯಕ್ತಿಕ ಶ್ರೇಷ್ಠ ಪ್ರದರ್ಶನ(51.20 ಸೆಕೆಂಡ್)ವನ್ನು ಉತ್ತಮಪಡಿಸಿಕೊಳ್ಳಬೇಕು.