ಟೆಸ್ಟ್ನಲ್ಲಿ ಚೊಚ್ಚಲ ಶತಕ ದಾಖಲಿಸಿದ ಪಾಂಡ್ಯ
ಶ್ರೀಲಂಕಾ ವಿರುದ್ಧದ ಮೂರನೆ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್
ಪಲ್ಲೆಕೆಲೆ, ಆ.13: ಶ್ರೀಲಂಕಾ ವಿರುದ್ಧದ ಮೂರನೆ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ನ ಎರಡನೆ ದಿನವಾಗಿರುವ ರವಿವಾರ ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಚೊಚ್ಚಲ ಶತಕ ದಾಖಲಿಸಿದರು.
ಪಲ್ಲೆಕೆಲೆ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುಜರಾತ್ನ 23ರ ಹರೆಯದ ಪಾಂಡ್ಯ 86 ಎಸೆತಗಳಲ್ಲಿ 7 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಲ್ಲಿ ಶತಕ ದಾಖಲಿಸಿದರು.
ಗಾಲೆಯಲ್ಲಿ ಲಂಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಪಾಂಡ್ಯ ಚೊಚ್ಚಲ ಅರ್ಧಶತಕ (50) ದಾಖಲಿಸಿದ್ದರು. ಕೊಲಂಬೊದಲ್ಲಿ ಎರಡನೆ ಟೆಸ್ಟ್ನಲ್ಲಿ 20 ರನ್ ಗಳಿಸಿದ್ದ ಪಾಂಡ್ಯ ಇದೀಗ ತನ್ನ ಮೂರನೆ ಟೆಸ್ಟ್ನಲ್ಲಿ ಶತಕ ದಾಖಲಿಸುವಲ್ಲಿ ಯಶಸ್ವಿಯಾದರು.
ಭಾರತ ಮೊದಲ ದಿನದಾಟದಂತ್ಯಕ್ಕೆ ಪ್ರಥಮ ಇನಿಂಗ್ಸ್ನಲ್ಲಿ 90 ಓವರ್ಗಳಲ್ಲಿ 6ವಿಕೆಟ್ ನಷ್ಟದಲ್ಲಿ 329 ರನ್ ಗಳಿಸಿತ್ತು. 13 ರನ್ ಗಳಿಸಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ವೃದ್ಧಿಮಾನ್ ಸಹಾ ಮತ್ತು 1 ರನ್ ಗಳಿಸಿರುವ ಹಾರ್ದಿಕ್ ಪಾಂಡ್ಯ ಔಟಾಗದೆ ಕ್ರೀಸ್ನಲ್ಲಿದ್ದರು.
ಬ್ಯಾಟಿಂಗ್ ಮುಂದುವರಿಸಿದ ಸಹಾ ಮತ್ತು ಪಾಂಡ್ಯ 7ನೆ ವಿಕೆಟ್ಗೆ 17 ರನ್ ರನ್ ಸೇರಿಸಿದರು. ಸಹಾ 16 ರನ್ ಗಳಿಸಿ ಔಟಾದರು.
ಎಂಟನೆ ವಿಕೆಟ್ಗೆ ಕುಲದೀಪ್ ಯಾದವ್ ಮತ್ತು ಪಾಂಡ್ಯ 62 ರನ್ ಸೇರಿಸಿದರು. ಕುಲದೀಪ್ 26 ರನ್ ಮತ್ತು ಮುಹಮ್ಮದ್ ಶಮಿ 8 ರನ್ ಗಳಿಸಿ ಔಟಾದರು.
ಊಟದ ವಿರಾಮದ ಹೊತ್ತಿಗೆ ಭಾರತ ಮೊದಲ ಇನಿಂಗ್ಸ್ನಲ್ಲಿ 122 ಓವರ್ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 487 ರನ್ ಗಳಿಸಿತ್ತು. ಪಾಂಡ್ಯ 108ರನ್ ಮತ್ತು ಉಮೇಶ್ ಯಾದವ್ 3 ರನ್ ಗಳಿಸಿ ಔಟಾಗದೆ ಕ್ರೀಸ್ನಲ್ಲಿದ್ದರು.
ಅಂತಿಮ ವಿಕೆಟ್ಗೆ ಪಾಂಡ್ಯ ಮತ್ತು ಯಾದವ್ ಮುರಿಯದ ಜೊತೆಯಾಟದಲ್ಲಿ 66ರನ್ಗಳ ಜೊತೆಯಾಟ ನೀಡಿದ್ದಾರೆ.
ಮೊದಲ ದಿನ ಭಾರತದ ಪರ ಶಿಖರ್ ಧವನ್(119) ಶತಕ ದಾಖಲಿಸಿದ್ದರು. ಲೋಕೇಶ್ ರಾಹುಲ್(85) ಶತಕ ವಂಚಿತಗೊಂಡಿದ್ದರು.